ಕೇರಳ(Kerala): ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್’ಐ) ದೇಶದಲ್ಲಿ ಆಂತರಿಕ ಗಲಭೆಗೆ ದೊಡ್ಡ ಸಂಚು ಹೂಡಿತ್ತು. ಅನ್ಯಧರ್ಮ ಗುರುಗಳನ್ನು ಗುರುತಿಸಿ ಹಿಟ್ ಲಿಸ್ಟ್ ತಯಾರಿಸಿತ್ತು ಎಂದು ರಾಷ್ಟ್ರೀಯ ತನಿಖಾ ದಳ(ಎನ್’ಐಎ) ನ್ಯಾಯಾಲಯಕ್ಕೆ ತಿಳಿಸಿದೆ.
ಬಂಧಿತರಾಗಿರುವ ಪಿಎಫ್’ಐ ಮುಖಂಡರ ನ್ಯಾಯಾಂಗ ಬಂಧನದ ಅವಧಿಯ ವಿಸ್ತರಣೆಗಾಗಿ ಸಲ್ಲಿಸಲಾದ ಅರ್ಜಿಯಲ್ಲಿ ಎನ್ಐಎ ಈ ವಿಷಯಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ.
ಮೂರು ತಿಂಗಳ ತನಿಖೆಯಲ್ಲಿ ಆಘಾತಕಾರಿ ಅಂಶಗಳು ಬಹಿರಂಗವಾಗಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ಪಿಎಫ್’ಐ ಅನ್ಯಧರ್ಮಗಳ ಯುವಕರನ್ನು ಉಗ್ರ ಕೃತ್ಯಗಳಿಗೆ ನೇಮಿಸಿಕೊಳ್ಳುವ ರಹಸ್ಯ ವಿಭಾಗವನ್ನು ಹೊಂದಿದ್ದು, ಇದು ಪಿಎಫ್ಐ ಕಚೇರಿಗಳ ಆಚೆ ನಡೆಯುತ್ತಿತ್ತು. ಇದಕ್ಕಾಗಿಯೇ ವಿಶೇಷ ಕಾರ್ಯಪಡೆ ರಚಿಸಿಕೊಳ್ಳಲಾಗಿತ್ತು.
ಉಗ್ರ ಸಂಘಟನೆಯಾದ ಐಎಸ್’ಐಎಸ್’ನೊಂದಿಗೆ ಪಿಎಫ್’ಐ ಸಂಪರ್ಕ ಹೊಂದಿದೆ ಎಂಬುದಕ್ಕೆ ಪುರಾವೆಗಳು ದೊರೆತಿವೆ. ಇನ್ನಷ್ಟು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್’ಐಎ ತಿಳಿಸಿದೆ.
ಬಂಧನ ಅವಧಿ 90 ದಿನ ವಿಸ್ತರಣೆ: ಇನ್ನು ಎನ್’ಐಎ ಕೋರಿಕೆಯ ಮೇರೆಗೆ ಬಂಧಿತರಾಗಿರುವ ಪಿಎಫ್’ಐ ಮುಖಂಡರ ಬಂಧನ ಅವಧಿಯನ್ನು 90 ದಿನಗಳವರೆಗೆ ವಿಸ್ತರಿಸಿ ಎನ್ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.