ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2024) ಎಂಬಿಎ, ಎಂಸಿಎ, ಎಂ.ಇ./ಎಂ.ಟೆಕ್./ ಎಂ.ಆರ್ಕಿಟೆಕ್ಟ್ ಕೋರ್ಸುಗಳ ಪ್ರವೇಶಕ್ಕೆ ಅರ್ಹತೆ ನಿರ್ಧರಿಸಲು ಜುಲೈ 13 ಮತ್ತು 14 ರಂದು ನಡೆಸಲು ನಿಗದಿಪಡಿಸಲಾಗಿದ್ದ ಪಿಜಿಸಿಇಟಿ -2024ರ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
ವಿವಿಧ ವಿಶ್ವವಿದ್ಯಾಲಯಗಳ ಪದವಿ ತರಗತಿಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಜುಲೈ 5 ಮತ್ತು ಜುಲೈ 10 ರಿಂದ ಪ್ರಾರಂಭವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರೀಕ್ಷೆ ನಡೆಯುವ ಹೊಸ ದಿನಾಂಕವನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಮುಂದೂಡಿಕೆ ಹಿನ್ನೆಲೆಯಲ್ಲಿ, ಪಿಜಿಸಿಇಟಿ-2024ಕ್ಕೆ ನೋಂದಣಿ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೂ ಕಾಲಾವಕಾಶ ವಿಸ್ತರಣೆ ಮಾಡಿ ಅಂತಿಮ ಅವಕಾಶ ಕಲ್ಪಿಸಲಾಗಿದೆ. ಇಲ್ಲಿಯವರೆಗೆ ನೋಂದಣಿ ಮಾಡದೇ ಇರುವ ಆಸಕ್ತ ಅಭ್ಯರ್ಥಿಗಳು ಜುಲೈ 7ರ ಒಳಗೆ ನೋಂದಣಿ ಮಾಡಿ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಿ ಜುಲೈ 9ರ ಸಂಜೆ 6.00 ರೊಳಗೆ ಶುಲ್ಕ ಪಾವತಿಸಬಹುದು. ನೋಂದಣಿ ಮಾಡಲು ಮತ್ತೊಮ್ಮೆ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪರಿಷ್ಕೃತ ಮಾಹಿತಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ನೋಡುತ್ತಿರಬೇಕು ಎಂದು ಸೂಚಿಸಿದ್ದಾರೆ.