ಮನೆ ಸುದ್ದಿ ಜಾಲ ಫಿಲಿಪ್ಸ್ ಆಲ್‌ರೌಂಡ್‌ ಆಟಕ್ಕೆ ಒಲಿದ ಜಯ – ಸೂಪರ್‌-8 ಗೆ ಜಿಗಿದ ಕಿವೀಸ್‌..!

ಫಿಲಿಪ್ಸ್ ಆಲ್‌ರೌಂಡ್‌ ಆಟಕ್ಕೆ ಒಲಿದ ಜಯ – ಸೂಪರ್‌-8 ಗೆ ಜಿಗಿದ ಕಿವೀಸ್‌..!

0

ಚೆನ್ನೈ : ಗ್ಲೆನ್‌ ಫಿಲಿಪ್ಸ್‌ ಆಲ್‌ರೌಂಡ್‌ ಆಟ ಹಾಗೂ ರಚಿನ್‌ ರವಿಂದ್ರ ಅಮೋಘ ಅರ್ಧಶತಕ ಬ್ಯಾಟಿಂಗ್‌ ನೆರವಿನಿಂದ ನ್ಯೂಜಿಲೆಂಡ್‌ ಕೆನಡಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2026ರ ವಿಶ್ವಕಪ್‌ ಟೂರ್ನಿಯ ಸೂಪರ್‌-8 ಹಂತಕ್ಕೆ ಲಗ್ಗೆಯಿಟ್ಟಿದೆ.

ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌, ಶ್ರೀಲಂಕಾ, ನ್ಯೂಜಿಲೆಂಡ್‌ ತಂಡಗಳು ಸೂಪರ್‌ 8 ಹಂತ ತಲುಪಿವೆ. ಇನ್ನೆರಡು ತಂಡಗಳಿಗೆ ಅವಕಾಶ ಇದೆ. ಇಂದು ಐರ್ಲೆಂಡ್‌ ವಿರುದ್ಧ ಜಿಂಬಾಬ್ವೆ ಗೆಲುವು ಸಾಧಿಸಿದ್ರೆ ಅಥವಾ ಮಳೆಯಿಂದ ಪಂದ್ಯ ರದ್ದಾದ್ರೆ ಜಿಂಬಾಬ್ವೆ ಸೂಪರ್‌-8ಗೆ ತಲುಪಲಿದ್ದು, ಆಸ್ಟ್ರೇಲಿಯಾ ವಿಶ್ವಕಪ್‌ನಿಂದ ಹೊರಬೀಳಲಿದೆ. ಇನ್ನೂ ಎ-ಗುಂಪಿನಲ್ಲಿರುವ ಪಾಕಿಸ್ತಾನ ನಮೀಬಿಯಾ ವಿರುದ್ಧ ಮುಂದಿನ ಪಂದ್ಯದಲ್ಲಿ ಗೆದ್ದರೆ, ಸೂಪರ್‌ 8 ಹಂತಕ್ಕೆ ತಲುಪಲಿದೆ.

ಕೆನಡಾ ವಿರುದ್ಧ ಗೆಲುವಿಗೆ 174 ರನ್‌ ಗುರಿ ಪಡೆದ ಕಿವೀಸ್‌ 15.1 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿ ಗೆಲುವು ಸಾಧಿಸಿತು. ನ್ಯೂಜಿಲೆಂಡ್‌ ಪರ ಸ್ಫೋಟಕ ಪ್ರದರ್ಶನ ತೋರಿದ ಗ್ಲೆನ್‌ ಫಿಲಿಪ್ಸ್‌ 36 ಎಸೆತಗಳಲ್ಲಿ 76 ರನ್‌ (6 ಸಿಕ್ಸರ್‌, 4 ಬೌಂಡರಿ), ರಚಿನ್‌ ರವೀಂದ್ರ 59 ರನ್‌ (39 ಎಸೆತ, 3 ಸಿಕ್ಸರ್‌, 4 ಬೌಂಡರಿ) ಚಚ್ಚಿ ಅಜೇಯರಾಗುಳಿದರು. ಇನ್ನೂ 262.50 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಫಿನ್‌ ಆಲೆನ್‌ 8 ಎಸೆತಗಳಲ್ಲಿ ಸ್ಫೋಟಕ 21 ರನ್‌ ಬಾರಿಸಿದ್ರೆ, ಟಿಮ್ ಸೀಫರ್ಟ್ 6 ರನ್‌ ಗಳಿಸಿ ಔಟಾದರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ್ದ ಕೆನಡಾ ತಂಡ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿತ್ತು. 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 173 ರನ್‌ ಗಳಿಸಿರುವ ಕೆನಡಾ ಕಿವೀಸ್‌ಗೆ 174 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಆರಂಭಿಕ ಆಟಗಾರ ಯುವರಾಜ್‌ ಸಾಮ್ರಾ ಭರ್ಜರಿ ಶತಕ ಸಿಡಿಸುವ ಮೂಲಕ ತಂಡವನ್ನ 170 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.