ಮನೆ ರಾಷ್ಟ್ರೀಯ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಫೋಗಾಟ್‌ ಅನರ್ಹತೆ; ಕಲಾಪದಿಂದ ಹೊರನಡೆದ ವಿಪಕ್ಷಗಳು

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಫೋಗಾಟ್‌ ಅನರ್ಹತೆ; ಕಲಾಪದಿಂದ ಹೊರನಡೆದ ವಿಪಕ್ಷಗಳು

0

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ಕುಸ್ತಿಪಟು ವಿನೇಶ್‌ ಫೋಗಾಟ್‌ ಅನರ್ಹ ವಿಚಾರದ ಕುರಿತು ಚರ್ಚೆಗೆ ಅವಕಾಶ ನೀಡದಿರುವುದಕ್ಕೆ ಅಸಮಧಾನಗೊಂಡ ವಿಪಕ್ಷ INDIA ಬ್ಲಾಕ್‌ ಸದಸ್ಯರು ರಾಜ್ಯಸಭೆ ಕಲಾಪ ಬಹಿಷ್ಕರಿಸಿ ಹೊರ ನಡೆದ ಘಟನೆ ಗುರುವಾರ (ಆಗಸ್ಟ್‌ 08) ನಡೆದಿದೆ.

Join Our Whatsapp Group

ಕುಸ್ತಿ ನಿಯಮದ ಪ್ರಕಾರ ಕೇವಲ 100 ಗ್ರಾಮ್‌ ನಷ್ಟು ತೂಕ ಹೆಚ್ಚಳವಾಗಿದ್ದರಿಂದ ಪ್ಯಾರಿಸ್‌ ಒಲಿಂಪಿಕ್ಸ್‌ ಸಮಿತಿ ಕುಸ್ತಿಪಟು ವಿನೇಶ್‌ ಫೋಗಾಟ್‌ ಅವರನ್ನು ಬುಧವಾರ ಅನರ್ಹಗೊಳಿಸಿತ್ತು.

ಈ ವಿಚಾರವಾಗಿ ರಾಜ್ಯಸಭೆ ವಿಪಕ್ಷ ನಾಯಕ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಫೋಗಾಟ್‌ ವಿಷಯವನ್ನು ಪ್ರಸ್ತಾಪಿಸಿ, ಅನರ್ಹತೆಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಚರ್ಚೆಯಾಗಬೇಕು ಎಂದರು. ಆದರೆ ರಾಜ್ಯಸಭಾ ಸಭಾಪತಿ ಜಗದೀಪ್‌ ಧನ್ಕರ್‌, ಈ ವಿಚಾರದಲ್ಲಿ ಚರ್ಚೆಗೆ ಅವಕಾಶ ಇಲ್ಲ ಎಂದು ಹೇಳಿದರು.

ಬಳಿಕ ತೃಣಮೂಲ ಕಾಂಗ್ರೆಸ್‌ ಸಂಸದ ಡೇರೆಕ್‌ ಓಬ್ರಿಯಾನ್‌ ಎದ್ದು ನಿಂತು, ಕೆಲವು ವಿಷಯ ಪ್ರಸ್ತಾಪಿಸಿದಾಗಲೂ ಅದಕ್ಕೂ ಸಭಾಪತಿ ಅನುಮತಿ ನೀಡಲಿಲ್ಲ. ಆಗ ಓಬ್ರಿಯಾನ್‌ ಗಟ್ಟಿ ಧ್ವನಿಯಲ್ಲಿ ಮಾತನಾಡಿದಾಗ, ನೀವು ಸಭಾಪತಿ ಪೀಠದ ವಿರುದ್ಧ ಕೂಗಾಡುತ್ತೀರಾ, ಸದನದಲ್ಲಿನ ನಿಮ್ಮ ನಡವಳಿಕೆ ಖಂಡನೀಯವಾಗಿದೆ. ಮುಂದಿನ ಬಾರಿ ಹೀಗಾದರೆ ಕಲಾಪದಿಂದ ಹೊರ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭಾಪತಿಯ ಹೇಳಿಕೆಯಿಂದ ಅಸಮಾಧಾನಗೊಂಡ ವಿಪಕ್ಷ ಮುಖಂಡರು ಕಲಾಪ ಬಹಿಷ್ಕರಿಸಿ ಹೊರನಡೆದಿರುವುದಾಗಿ ವರದಿ ತಿಳಿಸಿದೆ. ಒಲಿಂಪಿಕ್ಸ್‌ ನಿಂದ ಫೋಗಾಟ್‌ ಅನರ್ಹಗೊಂಡಿರುವ ವಿಚಾರದಿಂದ ವಿಪಕ್ಷಗಳ ಹೃದಯ ಮಾತ್ರ ನೂಚ್ಚು ನೂರಾದಂತೆ ಭಾವಿಸಿದಂತಿದೆ ಎಂದು ಧನ್ಕರ್‌ ಪ್ರತಿಕ್ರಿಯಿಸಿದ್ದಾರೆ.

ಫೋಗಾಟ್‌ ವಿಚಾರದಲ್ಲಿ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಆದರೆ ರಾಜಕಾರಣ ಆಕೆಯನ್ನು ಅಗೌರವಿಸುತ್ತಿದೆ ಎಂದು ಸಭಾಪತಿ ಹೇಳಿದರು. ಫೋಗಾಟ್‌ ಕುರಿತು ಕ್ರೀಡಾ ಸಚಿವ ಮನ್ಸುಖ್‌ ಮಾಂಡವಿಯಾ ಬುಧವಾರ ಲೋಕಸಭೆಯಲ್ಲಿ ನೀಡಿದ ಅಭಿಪ್ರಾಯಕ್ಕೆ ವಿಪಕ್ಷಗಳು ಅಸಮಧಾನ ವ್ಯಕ್ತಪಡಿಸಿದ್ದವು.