ಬೆಂಗಳೂರು: ಫೋನ್ ಕದ್ದಾಲಿಕೆಯನ್ನು ರಾಜ್ಯ ಸರ್ಕಾರವೇ ಮಾಡುತ್ತಿದೆ. ಇದು ಸುಳ್ಳು ಎಂದಾದರೆ ಕೂಡಲೇ ಈ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಬೆಂಗಳೂರು ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಕುರಿತು ಬಿಜೆಪಿ ಪ್ರಮುಖರೊಂದಿಗೆ ಸಭೆಯಲ್ಲಿ ಅವರು ಪಾಲ್ಗೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಫೋನ್ ಟ್ಯಾಪಿಂಗ್ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಪೊಲೀಸ್ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಅವರಿಂದ ತಿಳಿದುಕೊಂಡು ಹೇಳಿರಬಹುದು. ಫೋನ್ ಟ್ಯಾಪ್ ಮಾಡುವುದು ಅಕ್ರಮವಾಗಿದ್ದು, ಹಣ ಕೊಟ್ಟರೆ ಚೀನಾದಿಂದ ಉಪಕರಣ ಸಿಗುತ್ತದೆ. ರಾಜ್ಯಕ್ಕೆ ಇಂತಹ ಉಪಕರಣ ಎಷ್ಟು ಬಂದಿದೆ, ಎಲ್ಲೆಲ್ಲಿದೆ ಎಂದು ಪತ್ತೆ ಮಾಡಬೇಕು. ವಿರೋಧ ಪಕ್ಷಗಳ ನಾಯಕರ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ನನಗೂ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
ಫೋನ್ ಟ್ಯಾಪ್ ಮಾಡುವವರನ್ನು ಜೈಲಿಗೆ ಕಳುಹಿಸಬೇಕು. ಹಿಂದೆಯೂ ಈ ರೀತಿ ಪೊಲೀಸ್ ಅಧಿಕಾರಿಗಳು ಮಾಡಿ ತನಿಖೆಗೆ ಒಳಗಾಗಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸರ್ಕಾರ ಇದನ್ನು ಮಾಡಿಲ್ಲವೆಂದು ಎದೆ ಮುಟ್ಟಿ ಹೇಳುವುದಾದರೆ ತನಿಖೆಗೆ ನೀಡಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲಿ ಎಂದು ಒತ್ತಾಯಿಸಿದರು.
ಬೆಂಗಳೂರು ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಕುರಿತು ಚರ್ಚಿಸಲಾಗಿದೆ. ಮತದಾರರನ್ನು ಹುಡುಕಿ ಅವರ ಮನ ಒಲಿಸುವ ಕೆಲಸ ಮಾಡಬೇಕೆಂದು ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ ನಡೆಸಿ, ಪ್ರತಿ ಬೂತ್‌ಗಳಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ. ಟಿಕೆಟ್ ಕುರಿತು ಕೇಂದ್ರದ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು.