ಮೈಸೂರು : ಅವರದ್ದೇ ಶಾಸಕರ ಮೇಲೆ ಅವರದ್ದೇ ಸಚಿವರು ಗುಪ್ತಚಾರಿಕೆ ಮಾಡುತ್ತಿರುವುದು ಇದೇ ಮೊದಲು. ಸಿಎಂ ಆಗಬೇಕೆಂದುಕೊಂಡವರು ಅವರ ಸರ್ಕಾರದ ಮೇಲೆ ಗುಪ್ತಚರಿಕೆ ಆರಂಭಿಸಿರುವುದು ದುರಂತ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಫೋನ್ ಟ್ಯಾಪಿಂಗ್ ಪ್ರತಿಯೊಂದು ಸರ್ಕಾರದಲ್ಲೂ ಇತ್ತು, ಇಂದಿಗೂ ಇದೆ. ಆದರೆ, ಕೆಲವರು ಅದರಲ್ಲಿ ತೊಡಗಿಸಿಕೊಂಡಿದ್ದರೂ ‘ಸತಿ ಸಾವಿತ್ರಿ’ ರಂತೆ ವರ್ತಿಸುತ್ತಾರೆ. ಇತ್ತೀಚೆಗೆ ಇದು ಎಷ್ಟು ಹೆಚ್ಚಾಗಿದೆ ಎಂದು ಅವರನ್ನೇ ಕೇಳಬೇಕು ಎಂಬುದಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈಗ ಪೋನ್ ಟ್ಯಾಪಿಂಗ್ ನಡೆಯುತ್ತಿದೆ. ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು. ಈಗಲೂ ಫೋನ್ ಟ್ಯಾಪಿಂಗ್ ಇದೆ. ಕೆಲವರು ಫೋನ್ ಟ್ಯಾಪಿಂಗ್ ಮಾಡಿಯೂ ಪತಿವ್ರತೆ ರೀತಿ ವರ್ತಿಸುತ್ತಾರೆ. ನಾನು ಸತ್ಯ ಹೇಳುತ್ತೇನೆ ಕೇಳಿ, ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು. ಇವತ್ತಿನ ಸರ್ಕಾರದಲ್ಲಿ ಅದು ಎಷ್ಟು ಹೆಚ್ಚಾಗಿದೆ ಎಂಬುದು ಅವರನ್ನೇ ಕೇಳಬೇಕು ಎಂದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಅವರ ಇತ್ತೀಚಿನ ‘ಬೆಂಕಿ ಮತ್ತು ಹೊಗೆ’ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಆಂತರಿಕ ಘರ್ಷಣೆಗೆ ಭರವಸೆಗಳ ಉಲ್ಲಂಘನೆ ಮತ್ತು ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾರದರ್ಶಕತೆಯ ಕೊರತೆಯೇ ಕಾರಣ ಎಂದು ಹೇಳಿದರು.















