ಬೆಂಗಳೂರು(Bengaluru): ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಚಿತ್ರೀಕರಣ ನಿಷೇಧ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ. ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಆರ್.ಟಿ.ನಗರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಷೇಧದ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ. ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ಹೀಗಾಗಿ ಯಾವುದೇ ರೀತಿಯ ನಿರ್ಬಂಧ ಹಾಕಬಾರದು. ಮೊದಲು ಯಾವ ರೀತಿ ಇತ್ತೋ, ಅದೇ ರೀತಿ ನಿಯಮ ಇರಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಒಂದು ವರ್ಷ ಪೂರೈಸಿದ ಸರ್ಕಾರ: ಸರ್ಕಾರ ಒಂದು ವರ್ಷ ಪೂರೈಸಿದ್ದಕ್ಕೆ ದೊಡ್ಡ ಬಳ್ಳಾಪುರದಲ್ಲಿ ದೊಡ್ಡ ರ್ಯಾಲಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸರ್ಕಾರಿ ಕಾರ್ಯಕ್ರಮ ಬೆಂಗಳೂರಲ್ಲಿ ಇರಲಿದೆ. ಪಕ್ಷದ ಕಾರ್ಯಕ್ರಮ ಮಾತ್ರ ದೊಡ್ಡಬಳ್ಳಾಪುರದಲ್ಲಿದೆ. ಮುಂಬರುವ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇನೆ.
ಮಳೆ ಹಾನಿ- ಪರಿಹಾರ ಮೊತ್ತ ಹೆಚ್ಚಳ: ಮೂಲ ಸೌಕರ್ಯಕ್ಕಾಗಿ 500 ಕೋಟಿ ಒದಗಿಸಿದ್ದೇನೆ. ಮನೆಗಳನ್ನು ಕಟ್ಟಲು ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಿದ್ದೇವೆ. ಕೇಂದ್ರ ಸರ್ಕಾರದ ಬೆಳೆ ಪರಿಹಾರಕ್ಕಿಂತ ಹೆಚ್ಚು ಮಾಡಿದ್ದೇವೆ. ಪ್ರವಾಹದ ಸಂದರ್ಭದಲ್ಲಿ ಯಾರು ತೊಂದರೆಗೀಡಾಗಿದ್ದಾರೆ, ಅವರ ನೆರವಿಗೆ ಸರ್ಕಾರ ಕೂಡಲೇ ಧಾವಿಸಲಿದೆ. ಸೂಕ್ತವಾದ ಪರಿಹಾರವನ್ನೂ ನಮ್ಮ ಸರ್ಕಾರ ನೀಡಲಿದೆ ಎಂದರು.