ನವದೆಹಲಿ (New Delhi)-‘ಜನ ಗಣಮನ’ ಹಾಗೂ ‘ವಂದೇ ಮಾತರಂ’ ಗೀತೆಗಳನ್ನು ಸಮಾನವಾಗಿ ಪ್ರಚಾರ ಮಾಡಲು ನೀತಿ ರೂಪಿಸಬೇಕು ಎಂದು ಕೋರಿದ ಅರ್ಜಿಯ ಕುರಿತ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ದೆಹಲಿ ಮತ್ತು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
ಈ ಬಗ್ಗೆ ಶಿಕ್ಷಣ ಸಂಶೋಧನೆ ಮತ್ತು ತರಬೇತಿಗಾಗಿನ ರಾಷ್ಟ್ರೀಯ ಮಂಡಳಿ(ಎನ್‌ಸಿಆರ್‌ಟಿ) ಸಹ ಅಭಿಪ್ರಾಯ ತಿಳಿಸಬೇಕು ಎಂದು ಸೂಚಿಸಲಾಗಿದೆ.
ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಸಚಿನ್ ದತ್ತಾ ಅವರು, ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ನೀಡಿದರು. ಅಲ್ಲದೆ, ಈ ಬಗ್ಗೆ ಉತ್ತರಿಸಲು ಸಮಯಾವಕಾಶ ನೀಡಿದರು.
ಏತನ್ಮಧ್ಯೆ, ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮುನ್ನವೇ ಅರ್ಜಿದಾರ ಈ ಅರ್ಜಿ ಸಲ್ಲಿಸಿದ್ದಾಗಿ ಪ್ರಚಾರ ಮಾಡಿರುವುದಕ್ಕೆ ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು. ಈ ರೀತಿ ಮಾಡಿದರೆ, ಜನಪ್ರಿಯತೆಗಾಗಿ ಈ ಅರ್ಜಿ ಸಲ್ಲಿಸಲಾಗಿದೆ ಎಂಬಂತೆ ಭಾವಿಸಲಾಗುತ್ತದೆ ಎಂದು ಹೇಳಿತು.
ಈ ವೇಳೆ ‘ವಂದೇ ಮಾತರಂ’ಗೆ ಗೌರವ ಸಲ್ಲಿಸಬೇಕು ಎಂಬ ನಿಯಮ ಅಥವಾ ಮಾರ್ಗಸೂಚಿಗಳು ಇಲ್ಲದ ಕಾರಣ, ಈ ಗೀತೆಯನ್ನು ಬೇಕಾಬಿಟ್ಟಿ ಹಾಡಲಾಗುತ್ತಿದೆ. ಜೊತೆಗೆ ಪಕ್ಷಗಳು ಮತ್ತು ಸಿನಿಮಾಗಳಲ್ಲಿ ಇದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ಗೀತೆಯನ್ನು ಪ್ರಚಾರ ಮಾಡಲು ಸರ್ಕಾರ ರಾಷ್ಟ್ರೀಯ ನೀತಿಯನ್ನು ರೂಪಿಸಬೇಕು. ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಹಾಡಲಾದ ‘ವಂದೇ ಮಾತರಂ’ ಗೀತೆಗೆ ‘ಜನ ಗಣ ಮನ’ ಗೀತೆಗೆ ನೀಡಿದಷ್ಟು ಗೌರವ ನೀಡಬೇಕು ಎಂದು ಅರ್ಜಿದಾರ ಅಶ್ವಿನಿ ಕುಮಾರ್ ಉಪಾಧ್ಯಾಯ್ ಕೋರಿಕೊಂಡರು.