ಮನೆ ದೇವಸ್ಥಾನ ಪಿಡಾರ ಅರ್ಚಕರು

ಪಿಡಾರ ಅರ್ಚಕರು

0

ಕೇರಳದ ಶಾಕ್ತೇಯ ಕ್ಷೇತ್ರಗಳಲ್ಲಿ ಭಗವತಿಯನ್ನು ಪೂಜೆಯನ್ನು ನೆರವೇರಿಸುವ ಪಿಡಾರರು, ಕಾವಿಲ್ ಮೋಸ್, ಅಡಿಗಳ್, ತೀಯಾಟ್ಟುಣ್ಣೀ, ತೆಯ್ಯಾಂಬಾಡಿ ನಂಬ್ಯಾರ್, ಕಳಮೆವುತ್ತ್ ಕುರುಪ್, ವಾಳ್ವಿ ನಾಯರ್ ಎಂಬೀ ಸುಮಾರು ಏಳು ಸಮುದಾಯದವರಿದ್ದಾರೆ. ಇವರಿಗೆ ಮಧು-ಮಾಂಸಗಲು ವರ್ಜ್ಯವಲ್ಲ. ಇವರು ಇವುಗಳಿಂದಲೇ ದೇವಿಯನ್ನು ಅರ್ಚಿಸುವುದಾಗಿದೆ.


ಇವರಲ್ಲಿ ಪಿಡಾರರು ಎಂಬ ಸಮುದಾಯದವರು ಉತ್ತರ ಕೇರಳದ ತಿರುವರ್ ಕಾಟ್ ಮಾಡಾಯಿಕಾವ್, ಇರಿಕ್ಕೂರ್ ಮಾಮ್ಮಾನಿಕುನ್ನ್ ಕಾವ್, ವಳಪಟ್ಟಣಂ, ಕಳರಿವಾದಿಕ್ಕಲ್ ಕಾವ್, ನಿಲೇಶ್ವರದ ಮನ್ನಂಪುರತ್ತ್ ಕಾವ್ ಎಂಬೀ ಕ್ಷೇತ್ರದಲ್ಲಿ ಅರ್ಚಕರಾಗಿದ್ದರು. ಈ ಪಿಡಾರ್ ಅರ್ಚಕರ ಮೂಲ ಸ್ಥಾನ ಬಂಗಾಳವಾಗಿದೆ. ಅಲ್ಲಿ ಅವರನ್ನ “ಭಟ್ಟರಕರ್” ಎಂದು ಕರೆಯಲಾಗುತ್ತದೆ. ಭಗವಾನ್ ಪರಶುರಾಮರು ಕೇರಳಕ್ಕೆ ಆಂಧ್ರದಿಂದ ವೈದಿಕ ಬ್ರಾಹ್ಮಣರನ್ನು ಬಂಗಾಳದಿಂದ ಶಾಕ್ತೇಯ ಬ್ರಾಹ್ಮಣರಾದ ಪಿಡಾರನನ್ನು ಕರೆಸಿದರು ಎಂದು ಪೌರಾಣಿಕವಾಗಿ ಹೇಳಲಾಗಿದೆ. ಮಧು-ಮಾಂಸ ಪ್ರಿಯರಾದ ಪಿಡಾರರನ್ನು ಬಂಗಾಳಿ ಬ್ರಾಹ್ಮಣರೆಂದೂ ಇಲ್ಲಿ ಕರೆಯಲಾಗುತ್ತದೆ.
ಮಾಡಾಯಿಕಾವ್ ಕ್ಷೇತ್ರದ ಅರ್ಚಕ ಹುದ್ದೆಯು ನಾಲ್ಕು ತಾವಡಿಗಳಿಗೆ ಸರಣಿಯಾಗಿ ಬರುವುದಾಗಿದೆ. ತಾಯತ್ತಿಲ್ಲಂ, ನಡುವಿಲ್ಲಂ, ಆಯರಂವೆಳ್ಳ ಇಲ್ಲಂ, ಇಟ್ಟಮಾಲ್ ಇಲ್ಲಂ ಎಂಬ ಈ ನಾಲ್ಕು ತಾವಾಡಿಗಳನ್ನಾಗಿ ಸುಮಾರು 40 ಮನೆಗಳು ಇಲ್ಲಿವೆ. ಪ್ರತಿಯೊಂದು ತಾವಡಿಗಳಲ್ಲಿರುವ ಸದಸ್ಯರ ಸಂಖ್ಯೆಯನ್ನನುಸರಿಸಿ ಕ್ಷೇತ್ರದ ಅರ್ಚಕರ ಹುದ್ದೆ ಮತ್ತು ಇನ್ನಿತರ ಚಾಕರಿ ಕೆಲಸಗಳನ್ನ ಇಂತಿಷ್ಟು ಸಮಯವೆಂದು ನಿಗದಿಗೊಳಿಸಲಾಗುತ್ತದೆ. ಪೂಜಾಕ್ರಮವನ್ನು ಕಲಿತ ಹಿರಿಯ ವ್ಯಕ್ತಿಯು ಮುಖ್ಯ ಅರ್ಚಕನಾಗಿರುತ್ತಾನೆ. ಇವನಿಗೆ “ಮೂತ (ಹಿರಿಯ) ಪಿಡಾರರ್” ಎಂಬ ಗೌರವ ಸೂಚಕ ನಾಮವಿದೆ. ಮೂತಪಿಡಾರನ ಅನುಪಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಹಿರಿಯ ವ್ಯಕ್ತಿಗೆ ಎಳೆಯ (ಕಿರಿಯ) ಪಿಡಾರ ಎಂದು ಕರೆಯಲಾಗುತ್ತದೆ. ಇವರಿಬ್ಬರನ್ನೂ ಕುಟುಂಬತಾವಡಿಯವರು ಒಮ್ಮತದಿಂದ ಆರಿಸುವುದಾಗಿದೆ. ಈ ಪಿಡಾಲರುಗಳು ಚಿರಕ್ಕಲ್ ರಾಜನಿಂದ
ಆಚಾರಪಟ್ಟವನ್ನು ಸ್ವೀಕರಿಸುವುದು ಕ್ರಮವಾಗಿದೆ. ಕ್ಷೇತ್ರಕ್ಕಾಗಮಿಸುವ ಭಕ್ತರ ಸಂದಣಿಯನ್ನು ನಿಯಂತ್ರಿಸುವುದು, ಸೇವಾ ಮಾಹಿತಿಗಳನ್ನು ನೀಡುವುದು, ಸೇವಾ ಪ್ರಸಾದಗಳನ್ನು ವಿತರಿಸುವುದು, ಭಗವತಿಯ ಶಾಕ್ತೇಯ ಪೂಜೆಗೆ ಕೋಳಿಬಲಿಯನ್ನರ್ಪಿಸಿ ಮಾಂಸಮಾಡಿ ದೇಗುಲದ ಮೂಡು-ತೆಂಗು ಭಾಗದ ತಿಡಪಳ್ಳಿ (ಅಗ್ರಸಾಲೆ)ಯಲ್ಲಿ ನೈವೇದ್ಯ ತಯಾರಿಸುವುದು ಇತ್ಯಾದಿ ಕೆಲಸಗಳು ಆ ಅವಧಿಯ ತಾವಡಿಯವರ ಇನ್ನಿತರ ಸದಸ್ಯರುಗಳ ಕರ್ತವ್ಯವಾಗಿದೆ.
ಈ ಪಿಡಾರ್ ತಾವಡಿಯ ಮುತ್ತೈದೆಯರಿಗೂ ನಿರ್ದಿಷ್ಟ ಕರ್ತವ್ಯಗಳಿವೆ. ಸಿಂಹಮಾಸದ ಪುತ್ತರಿ ಉತ್ಸವಕ್ಕೆ ಊರ ಭಕ್ತರು ಕ್ಷೇತ್ರಕ್ಕೆ ಒಪ್ಪಿಸಿದ ಭತ್ತವನ್ನು ಕ್ಷೇತ್ರ ವಠಾರದಲ್ಲಿ ಕುಟ್ಟಿ ಅಕ್ಕಿ ಮತ್ತು ಅವಲಕ್ಕಿಯನ್ನು ಮಾಡಿಸುವ ಹೊಣೆಗಾರಿಕೆಯೂ ಇರುವುದಾಗಿದೆ. ದೇವಿ ಭಗವತಿಗೆ ಸಲ್ಲಿಸುವ ಬಟ್ಟಲು ಪಾಯಸವನ್ನು ಮಧ್ಯಾಹ್ನ ಪೂಜಾ ನಂತರ ಇನ್ನಿತರ ತಾವಡಿಯವರಿಗೆ ಪ್ರಸಾದವಾಗಿ ವಿತರಿಸುವ ಕೆಲಸವು ಇವರದ್ದಾಗಿದೆ. ಪಾಯಸ ಕೊಂಡೊಯ್ಯಲು ಪ್ರತಿಯೊಂದನ್ನು ತಾವಡಿಯವರೂ ಪಾತ್ರೆ ಅಮೇತ ಕ್ಷೇತ್ರಾಂಗಣಕ್ಕೆ ಬರುವುದಾಗಿದೆ. ಈ ಪಾಯಸವನ್ನು ಪ್ರಸಾದವಾಗಿ ಸ್ವೀಕರಿಸುವುದು ಅವರ ಪರಂಪರಾಗತ ಅವಕಾಶವಾಗಿದೆ.
ಹಿಂದೆ ಎಲ್ಲಾ ಸೇವೆಗಳ ಆದಾಯವೂ ಸೇವಾ ಕರ್ತವ್ಯದಲ್ಲಿದ್ದ ತಾವಡಿಯವರಿಗೆ ಹಂಚಿಹೋಗುತ್ತಿತ್ತು. ಆದರೆ ಇದೀಗ ಕ್ಷೇತ್ರದ ಆಡಳಿತೆಯು ಮಲಬಾರ್ ದೇವಸ್ವಂ ಬೋರ್ಡಿನ ಅಧೀನಕ್ಕೆ ಒಳಪಟ್ಟನಂತರ ಪ್ರತಿಯೊಂದು ಸೇವೆಯಲು ನಿರ್ದಿಷ್ಟ ಶೇಕಡವಾರು ಮೊತ್ತವನ್ನು ಮಾತ್ರವೇ ವಿತರಿಸಲಾಗುತ್ತಿದೆ. ಕೆಲವರು ಕರ್ಮಿಗಳಾಗಿ ವಿವಿಧೆಡೆಗಳಲ್ಲಿ ಶಾಕ್ತೇಯ ಪೂಜೆಗಳನ್ನು ನಿರ್ವಹಿಸುತ್ತಾರೆ. ಇದಿಗ ಈ ಪಿಡಾರರ ಕುಡುಂಬದ ಸದಸ್ಯರು ಬೇರೆ ಬೇರೆ ಉದ್ಯೋಗಗಳನ್ನರಸಿ ತೆರಳಿ ಸಂಪಾದಿಸುತ್ತಿದ್ದಾರೆ.

ಹಿಂದಿನ ಲೇಖನಪೂರ್ವಾಷಾಢ ನಕ್ಷತ್ರ
ಮುಂದಿನ ಲೇಖನNHAI: 10 ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ