ಮನೆ ಸುದ್ದಿ ಜಾಲ ಪ್ಲಾಸ್ಟಿಕ್‌ ಮುಕ್ತ ಚಾಮುಂಡಿಬೆಟ್ಟ ಅಭಿಯಾನ: ಅರ್ಧ ಕಿ.ಮೀ.ನಲ್ಲಿ 30 ಚೀಲ ಪ್ಲಾಸ್ಟಿಕ್, 4 ಚೀಲ ಮದ್ಯದ...

ಪ್ಲಾಸ್ಟಿಕ್‌ ಮುಕ್ತ ಚಾಮುಂಡಿಬೆಟ್ಟ ಅಭಿಯಾನ: ಅರ್ಧ ಕಿ.ಮೀ.ನಲ್ಲಿ 30 ಚೀಲ ಪ್ಲಾಸ್ಟಿಕ್, 4 ಚೀಲ ಮದ್ಯದ ಬಾಟಲಿ ಸಂಗ್ರಹ

0

ಮೈಸೂರು: ಅರಣ್ಯ ಇಲಾಖೆಯಿಂದ ‘ನಾಡದೇವಿಯ ಒಡಲನ್ನು ತ್ಯಾಜ್ಯ ಮುಕ್ತಗೊಳಿಸೋಣ’ ಎಂಬ ಘೋಷಣೆಯೊಂದಿಗೆ ‘ಪ್ಲಾಸ್ಟಿಕ್‌ ಮುಕ್ತ ಚಾಮುಂಡಿಬೆಟ್ಟ ಅಭಿಯಾನ’ವನ್ನು ಶುಕ್ರವಾರದಿಂದ ಆರಂಭಿಸಲಾಗಿದ್ದು, ಮಾರ್ಚ್‌ 21ರವರೆಗೆ ಹಮ್ಮಿಕೊಳ್ಳಲಾಗಿದೆ.

ವಿಶ್ವ ವನ್ಯಜೀವಿ ದಿನದಿಂದ ಆರಂಭಿಸಿದ ಅಭಿಯಾನ, ವಿಶ್ವ ಅರಣ್ಯ ದಿನದವರೆಗೆ ಮುಂದುವರಿಯಲಿದೆ.

ಬೆಟ್ಟಕ್ಕೆ ಬರುವವರು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದು ಸಾಮಾನ್ಯವಾಗಿದೆ. ಅಲ್ಲದೇ, ಅಲ್ಲಲ್ಲಿ ಗುಂಪು ಗುಂಪಾಗಿ ಕುಳಿತು ಮದ್ಯ ಸೇವಿಸುವುದು ಕೂಡ ನಡೆಯುತ್ತಿದೆ. ಹೀಗೆ, ‘ಪಾರ್ಟಿ’ ಮಾಡಿದವರು ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಅಲ್ಲದೇ, ಬೇರೆ ಜಿಲ್ಲೆ, ರಾಜ್ಯ ಹಾಗೂ ದೇಶಗಳಿಂದ ಬರುವ ಪ್ರವಾಸಿಗರಿಗೆ ಅಲ್ಲಲ್ಲಿ ಸಂಗ್ರಹವಾಗಿರುವ ತ್ಯಾಜ್ಯದ ಗುಡ್ಡೆಗಳು ಸ್ವಾಗತ ನೀಡುತ್ತಿವೆ! ಇದನ್ನು ತಪ್ಪಿಸಲು ಅರಣ್ಯ ಇಲಾಖೆಯು ಅಭಿಯಾನವನ್ನು ಆರಂಭಿಸಿದೆ. ಅಭಿಯಾನದ ಮೊದಲ ದಿನವಾದ ಶುಕ್ರವಾರ ಅರಣ್ಯ ಇಲಾಖೆಯ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವಲಯ ಅರಣ್ಯಾಧಿಕಾರಿ (ನಗರ ಹಸಿರೀಕರಣ ವಲಯ) ಧನ್ಯಶ್ರೀ ಎಂ.ಆರ್. ಈ ಕುರಿತು ಮಾತನಾಡಿ, ನಾವು ಮತ್ತು ನಮ್ಮ ಸಿಬ್ಬಂದಿ ಶುಕ್ರವಾರ ಅರ್ಧ ಕಿ.ಮೀ.ವರೆಗೆ ಮೂರು ತಾಸುಗಳವರೆಗೆ ಸ್ವಚ್ಛತಾ ಕಾರ್ಯ ಕೈಗೊಂಡೆವು. ತಾವರೆಕಟ್ಟೆ ಮುಖ್ಯ ಗೇಟ್‌’ನಿಂದ ಅಭಿಯಾನ ಆರಂಭಿಸಲಾಗಿದೆ. ಅಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು, ತಿಂಡಿ–ತಿನಿಸುಗಳ ಪೇಪರ್‌’ಗಳು, ಕವರ್‌’ಗಳು ಮೊದಲಾದವುಗಳನ್ನು ಹಾಕಿರುವುದು ಕಂಡುಬಂದಿದ್ದು, ಅವುಗಳನ್ನು ಸಂಗ್ರಹಿಸಲಾಯಿತು ಎಂದು ತಿಳಿಸಿದರು.

ಇಲಾಖೆಯ 12 ಮಂದಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯಿಂದ ಇಬ್ಬರನ್ನು ಬಳಸಿಕೊಂಡಿದ್ದೇವೆ. 30 ಚೀಲ ಪ್ಲಾಸ್ಟಿಕ್‌ ಹಾಗೂ 4 ಮೂಟೆಗಳಷ್ಟು ಮದ್ಯದ ಗಾಜಿನ ಬಾಟಲಿಗಳನ್ನು ಸಂಗ್ರಹಿಸಲಾಯಿತು ಎಂದು ಮಾಹಿತಿ ನೀಡಿದರು.

ದೇವಸ್ಥಾನದ ಆವರಣವನ್ನು ಪ್ಲಾಸ್ಟಿಕ್‌ ಮುಕ್ತ ಪ್ರದೇಶ ಎಂದು ಈಗಾಗಲೇ ಧಾರ್ಮಿಕ ದತ್ತಿ ಇಲಾಖೆಯಿಂದ ಘೋಷಿಸಲಾಗಿದೆ. ಇಡೀ ಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತ ವಲಯವನ್ನಾಗಿಸಬೇಕು ಎನ್ನುವುದು ನಮ್ಮ ಉದ್ದೇಶ. ಹಂತ ಹಂತವಾಗಿ ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.