ಮನೆ ರಾಜ್ಯ ಆ್ಯಸಿಡ್‌ ದಾಳಿಗೊಳಗಾದ ಸಂತ್ರಸ್ತ ಯುವತಿಗೆ ಪ್ಲಾಸ್ಟಿಕ್‌ ಸರ್ಜರಿ

ಆ್ಯಸಿಡ್‌ ದಾಳಿಗೊಳಗಾದ ಸಂತ್ರಸ್ತ ಯುವತಿಗೆ ಪ್ಲಾಸ್ಟಿಕ್‌ ಸರ್ಜರಿ

0

ಬೆಂಗಳೂರು (Bengaluru)-ಆ್ಯಸಿಡ್‌ ದಾಳಿಗೆ ಒಳಗಾಗಿರುವ ಸಂತ್ರಸ್ತ ಯುವತಿಗೆ ಪ್ಲಾಸ್ಟಿಕ್‌ ಸರ್ಜರಿ ಯಶಸ್ವಿಯಾಗಿ ನೆರವೇರಿದೆ. ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡು ಬಂದಿದ್ದು, ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಗೆ ವೈದ್ಯರು ಪ್ಲಾಸ್ಟಿಕ್‌ ಸರ್ಜರಿ ನಡೆಸಿದ್ದಾರೆ. ಯುವತಿಯ ಎರಡು ತೊಡೆ ಭಾಗದ ಚರ್ಮ ತೆಗೆದು ಸುಟ್ಟ ಭಾಗಕ್ಕೆ ಕಸಿ ಮಾಡಿದ್ದಾರೆ. ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡು ಬಂದಿದ್ದು, ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಪ್ರಜ್ಞಾಹೀನಳಾಗಿದ್ದ ಯುವತಿಗೆ ಸೋಮವಾರ ಮಧ್ಯರಾತ್ರಿಯಿಂದ ಪ್ರಜ್ಞೆ ಬಂದಿದ್ದು, ಪೋಷಕರ ಜತೆ ಮಾತನಾಡುತ್ತಿದ್ದಾರೆ. ಯುವತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವುದು ಪೋಷಕರಲ್ಲೂ ಕೊಂಚ ಸಮಾಧಾನ ಮೂಡಿದೆ.

ಇನ್ನು ಕೃತ್ಯ ನಡೆಸಿರುವ ನಾಗೇಶ್‌ ಕೃತ್ಯಕ್ಕೂ ಮೊದಲು ಹೊಸ ಸಿಮ್‌ ಖರೀದಿಸಿರುವುದು ಬೆಳಕಿಗೆ ಬಂದಿದೆ. ಮತ್ತೊಂದೆಡೆ ಮೆಜೆಸ್ಟಿಕ್‌ನ ಪಾರ್ಕಿಂಗ್‌ ಸ್ಥಳದಲ್ಲಿ ಆತನ ಬೈಕ್‌ ಪತ್ತೆಯಾಗಿದೆ. ಆರೋಪಿಯ ಕರೆಗಳ ಮಾಹಿತಿ ಸಂಗ್ರಹಿಸಿದಾಗ ಆತ ಹೊಸ ಸಿಮ್‌ ಖರೀದಿಸಿರುವುದು ತಿಳಿದುಬಂದಿದೆ.

ಹಳೆ ಮೊಬೈಲ್‌ ಅನ್ನು ಹೊಸಕೋಟೆ ಬಳಿ ಎಸೆದಿದ್ದಾನೆ. ಆದರೆ, ಇದುವರೆಗೂ ಹೊಸ ಸಿಮ್‌ ಆ್ಯಕ್ಟಿವೇಷನ್‌ ಮಾಡಿಕೊಂಡಿಲ್ಲ. ಈ ಮಧ್ಯೆ ದೈವ ಭಕ್ತನಾಗಿರುವ ನಾಗೇಶ್‌, ಆಗಾಗ್ಗೆ ತಮಿಳುನಾಡು, ಆಂಧ್ರಪ್ರದೇಶದ ದೇವಾಲಯಗಳಿಗೆ ಹೋಗುತ್ತಿದ್ದ ಎಂಬ ಮಾಹಿತಿ ಮೇರೆಗೆ ನೆರೆ ರಾಜ್ಯಗಳಲ್ಲಿ ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ಅದಕ್ಕಾಗಿ ತಿರುಪತಿ, ತಮಿಳುನಾಡಿನ ಕೆಲ ದೇವಾಲಯಗಳಿಗೆ ಎರಡು ಪ್ರತ್ಯೇಕ ತಂಡಗಳು ತೆರಳಿವೆ. ಮೆಜೆಸ್ಟಿಕ್‌ನಿಂದ ಹೊರಡುವ ಮೊದಲು ಆರೋಪಿ ಸಮೀಪದಲ್ಲಿಯೇ ಬೈಕ್‌ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.