ಮೈಸೂರು (Mysuru): ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದಾರೆ.
ಮೈಸೂರಿಗೆ ಆಗಮಿಸಿದ ಮೋದಿ ಅವರನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಬಳಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಗನಹಳ್ಳಿ ಕೋಚಿಂಗ್ ಟರ್ಮಿನಲ್ ಗೆ ಅಡಿಗಲ್ಲು, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಶ್ರೇಷ್ಠತಾ ಕೇಂದ್ರ ಎರಡು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.
ಬಳಿಕ ಕೇಂದ್ರದ ಯೋಜನೆಯ ಫಲಾನುಭವಿಗಳ ಜತೆಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.
ಈ ವೇಳೆ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಬೊಮ್ಮಾಯಿ ಅವರು, ಭಾರತದ ದಿಟ್ಟ ದೀಮಂತ ನಾಯಕ ಪ್ರಧಾನಿ ಮೋದಿ. ಅವರು ಅಧಿಕಾರಕ್ಕಾಗಿ ಎಂದೂ ರಾಜಕಾರಣ ಮಾಡಿದವರಲ್ಲ. ಮೋದಿ ಅವರದ್ಧು ಮಾನವೀಯ ರಾಜಕೀಯ ಎಂದು ಕೊಂಡಾಡಿದರು.
ಎಲ್ಲರ ಹೃದಯವನ್ನ ಗೆದ್ದ ಪ್ರಧಾನಿ ಮೋದಿ ಜನಪರ ಯೋಜನೆಗಳನ್ನ ಜಾರಿ ಮಾಡಿದ್ದಾರೆ. ಮೋದಿಗೆ ಮೈಸೂರು ಅಂದರೇ ಪ್ರೀತಿ. ಯೋಗ ದಿನಕ್ಕೆ ಮೈಸೂರಿಗೆ ಬರಬೇಕೆಂದು ಆಸೆ ಹೊತ್ತಿದ್ದರು. ಬೇರೆ ಕಾರಣಗಳಿಂದ ಮೈಸೂರಿಗೆ ಬರಲಾಗಲಿಲ್ಲ. ಈ ಬಾರಿ ಮಳೆ ಬಂದ್ರೂ ಪರವಾಗಿಲ್ಲ ಬರುವೆ. ಮೈಸೂರಿನಲ್ಲಿ ಯೋಗ ದಿನಾಚಾರಣೆಯಲ್ಲಿ ಪಾಲ್ಗೊಳ್ಳುವೆ ಎಂದಿದ್ದರು. ಅದರಂತೆ ಮೈಸೂರಿಗೆ ಆಗಮಿಸಿದ್ದಾರೆ ಎಂದರು.
ಈ ದೇಶದಲ್ಲಿ ಅಧಿಕಾರಕ್ಕಾಗಿ ರಾಜಕಾರಣ ನೋಡಿದ್ದೇವೆ. ಮೋದಿಯವರದ್ದು ದೇಶದ ಅಭಿವೃದ್ದಿಗಾಗಿ ಮಾತ್ರ ರಾಜಕಾರಣ. ಹಿಂದಿನ ಪ್ರಧಾನಿಗಳು ಅಧಿಕಾರಕ್ಕಾಗಿ ರಾಜಕಾರಣ ಮಾಡಿದರು. ಈಗಿನ ಪ್ರಧಾನಿ ಅಧಿಕಾರಕ್ಕಾಗಿ ಎಂದೂ ರಾಜಕಾರಣ ಮಾಡಿದವರಲ್ಲ. ಮೋದಿ ಅವರಿಗೆ ಕಷ್ಟ, ಸುಖ, ಅವಮಾನ ಎಲ್ಲವೂ ಗೊತ್ತು. ಮೋದಿಯವರದ್ದು ಮಾನವೀಯ ರಾಜಕೀಯ ಎಂದರು.