ನವದೆಹಲಿ(Newdelhi): ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ನಿಧನದಿಂದ ತೀವ್ರ ನೋವಾಗಿದೆ. ಅವರು ನಮ್ಮ ಕಾಲದ ಧೀಮಂತ ನಾಯಕಿಯಾಗಿ ಸದಾ ನೆನಪಿನಲ್ಲುಳಿಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ಅವರು ತಮ್ಮ ದೇಶದ ಜನರಿಗೆ ಸ್ಫೂರ್ತಿದಾಯಕ ನಾಯಕತ್ವವನ್ನು ನೀಡಿದ್ದರು. ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಸಭ್ಯತೆಯಿಂದ ಇದ್ದವರು. ಅವರ ಕುಟುಂಬದ ಮತ್ತು ಬ್ರಿಟನ್ ಜನರ ಈ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ, ಅವರ ಜತೆ ನಾವಿದ್ದೇವೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
2015 ಮತ್ತು 2018ರಲ್ಲಿ ಬ್ರಿಟನ್‌ಗೆ ಭೇಟಿ ನೀಡಿದ್ದಾಗ ರಾಣಿ 2ನೇ ಎಲಿಜಬೆತ್ ಜತೆ ಮಾತುಕತೆ ನಡೆಸಿರುವುದು ಸ್ಮರಣೀಯವಾಗಿದೆ. ಅವರ ಸ್ವಾಗತ ಮತ್ತು ದಯಾಪರತೆಯನ್ನು ಎಂದಿಗೂ ಮರೆಯಲಾರೆ. ಮಹಾತ್ಮ ಗಾಂಧಿಯವರು ಮದುವೆಗೆ ಉಡುಗೊರೆಯಾಗಿ ನೀಡಿದ್ದ ಕರವಸ್ತ್ರವನ್ನು ಸಭೆಯೊಂದರ ವೇಳೆ ಅವರು ನನಗೆ ತೋರಿಸಿದ್ದರು ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಬ್ರಿಟಿಷ್ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ, 96 ವರ್ಷ ವಯಸ್ಸಿನ 2ನೇ ಎಲಿಜಬೆತ್ ಗುರುವಾರ ರಾತ್ರಿ ನಿಧನರಾಗಿದ್ದಾರೆ.