ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಹಿಂದಿರುಗಿದ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಈ ಮೂಲಕ ಅವರು ಈ ಸಾಧನೆ ಮಾಡಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶುಭಾಂಶು ಶುಕ್ಲಾ ಅವರ ಸಮರ್ಪಣಾ ಮನೋಭಾವ ಭಾರತದ ಶತಕೋಟಿ ಕನಸುಗಳಿಗೆ ಸ್ಫೂರ್ತಿ ನೀಡಿದೆ. ಆಕ್ಸಿಯಮ್ -4ರ ಭಾಗವಾಗಿ ಶುಭಾಂಶು ಶುಕ್ಲಾ ಅವರ ಪ್ರಯಾಣವು ಭಾರತದ “ಮಾನವ ಬಾಹ್ಯಾಕಾಶ ಹಾರಾಟ ಮಿಷನ್, ಗಗನಯಾನ”ವನ್ನು ಸಾಧಿಸುವಲ್ಲಿ ಒಂದು ಮೈಲಿಗಲ್ಲು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ತಮ್ಮ ಐತಿಹಾಸಿಕ ಬಾಹ್ಯಾಕಾಶ ಕಾರ್ಯಾಚರಣೆಯಿಂದ ಭೂಮಿಗೆ ಮರಳುತ್ತಿರುವುದನ್ನು ಸ್ವಾಗತಿಸಲು ನಾನು ಭಾರತದ ಜನರೊಂದಿಗೆ ಸೇರುತ್ತೇನೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಭಾರತದ ಮೊದಲ ಗಗನಯಾತ್ರಿಯಾಗಿ ಶುಭಾಂಶು ಶುಕ್ಲಾ ಅವರು ತಮ್ಮ ಸಮರ್ಪಣೆ, ಧೈರ್ಯದ ಮನೋಭಾವದ ಮೂಲಕ ಶತಕೋಟಿ ಕನಸುಗಳಿಗೆ ಸ್ಫೂರ್ತಿ ನೀಡಿದ್ದಾರೆ. ಇದು ನಮ್ಮದೇ ಆದ ಮಾನವ ಬಾಹ್ಯಾಕಾಶ ಹಾರಾಟ ಮಿಷನ್ – ಗಗನಯಾನಕ್ಕೆ ಮತ್ತೊಂದು ಮೈಲಿಗಲ್ಲು” ಎಂದು ಅವರು ಎಕ್ಸ್ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.














