ಬೆಂಗಳೂರು(Bengaluru): ಪ್ರಧಾನಿ ನರೇಂದ್ರ ಮೋದಿ ಅಧುನಿಕ ವಿಕಾಸ ಪುರುಷ ಹಲವು ಸಮಸ್ಯೆಗಳನ್ನು ನಿವಾರಿಸಿದ್ದಾರೆ. ಬಲಿಷ್ಠ ಭಾರತ ನಿರ್ಮಾಣಕ್ಕೆ ಮೋದಿ ಅವರ ಕೊಡುಗೆ ಅಪಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕೊಂಡಾಡಿದರು.
ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಪ್ರಧಾನಿ ಮೋದಿಗೆ ಬೆಳ್ಳಿ ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು.
ನಂತರ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂದಿನ ಕಾರ್ಯಕ್ರಮ ಸುವರ್ಣಾಕ್ಷರದಲ್ಲಿ ಬರೆದಿರುವ ದಿನ. ಕನಕ, ವಾಲ್ಮಿಕಿಗೆ ಮೋದಿ ಮಾಲಾರ್ಪಣೆ ಮಾಡಿದ್ದಾರೆ. ಈ ಮೂಲಕ ನಾಡಿನ ಭಾವನೆಗಳಿಗೆ ಗೌರವ ನೀಡಿದ್ದಾರೆ. ಇಂದು ಮೋದಿ ಹಲವು ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಕನ್ನಡಿಗರ ಪರವಾಗಿ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಭಾರತವನ್ನ ಅತಿ ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಆರ್ಥಿಕವಾಗಿ ಭಾರತ ಸದೃಢವಾಗಲು ಪ್ರಧಾನಿ ಮೋದಿ ಅವರ ನಿರ್ಧಾರಗಳೇ ಕಾರಣ ಎಂದು ಗುಣಗಾನ ಮಾಡಿದರು.
ಕೆಂಪೇಗೌಡರು ಸುವರ್ಣ ಯುಗದ ದರ್ಶನ ಮಾಡಿದರು ಕೆಂಪೇಗೌಡರಿಂದ ಬೆಂಗಳೂರು ವಿಶ್ವಮಾನ್ಯವಾಗಿದೆ. ಕೆಂಪೇಗೌಡರು ಜನರಿಗೆ ಹಲವಾರು ಯೋಜನೆ ಜಾರಿಗೆ ತಂದರು. ಅಂಥ ಕೆಂಪೇಗೌಡರಿಗೆ ಇಂದು ಗೌರವ ಸಲ್ಲಿಸಿದ್ದೇವೆ. ಕೆಂಪೇಗೌಡರ ಚಿಂತನೆಯಂತೆ ನಾಡ ಕಟ್ಟೋಣ ಎಂದು ಸಿಎಂ ಬೊಮ್ಮಾಯಿ ಕರೆ ನೀಡಿದರು.