ಮಂಗಳೂರು(Mangalore): ನಗರದ ಹೊರವಲಯದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಡೆಯಲಿದ್ದು, ಮೈದಾನಕ್ಕೆ ಕಪ್ಪು ಅಂಗಿ ಧರಿಸಿ ಬಂದಿರುವವರನ್ನು ವಾಪಸ್ ಕಳುಹಿಸಲಾಗುತ್ತಿದೆ.
ಕಪ್ಪು ಬಣ್ಣದ ಅಂಗಿ ಹಾಕಿ ಬರಬಾರದು ಎಂದು ಪೊಲೀಸರು ವಿಧಿಸಿರುವ ನಿಯಮದ ಅರಿವಿಲ್ಲದ ಹಲವು ಯುವಕರು, ಹಿರಿಯರು ಕಪ್ಪು ಟೀ ಶರ್ಟ್, ಶರ್ಟ್ ಧರಿಸಿ ಬಂದಿದ್ದರು. ಪ್ರವೇಶ ದ್ವಾರದಲ್ಲೇ ಅವರನ್ನು ವಾಪಸ್ ಕಳುಹಿಸಲಾಗುತ್ತಿದ್ದು, ಕೆಲವರು ಹೊಸ ಅಂಗಿ ಖರೀದಿಸಲು ಅಂಗಡಿ ಕಡೆಗೆ ಮುಖ ಮಾಡಿದ್ದಾರೆ.
ಇನ್ನು ಕೆಲವರು ದಿಕ್ಕು ತೋಚದೆ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದಾರೆ. ಕಪ್ಪು ಲುಂಗಿ ಧರಿಸಿ ಬಂದಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಯೊಬ್ಬರಿಗೂ ಪ್ರವೇಶ ನಿರಾಕರಿಸಲಾಯಿತು.
ಸಿಗರೇಟ್, ಲೈಟರ್, ಬೆಂಕಿಪೊಟ್ಟಣ, ಎಲೆ-ಅಡಿಕೆ, ಸುಣ್ಣ ಇಂತಹ ಯಾವುದೇ ವಸ್ತುಗಳನ್ನು ಒಳಗೆ ಕೊಂಡೊಯ್ಯುವಂತಿಲ್ಲ ಎಂದು ಪೊಲೀಸರು ತಿಳಿಸುತ್ತಿದ್ದಾರೆ.
ಕಟ್ಟುನಿಟ್ಟಿನ ತಪಾಸಣೆ ನಡೆಸಿದ ಬಳಿಕ ಜನರನ್ನು ಸಮಾವೇಶದ ಮೈದಾನದ ಒಳಗೆ ಬಿಡಲಾಗುತ್ತಿದೆ.