ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ನೆನಪಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ರಾಜ್ಯಕ್ಕೆ ಮೋದಿ ಭೇಟಿ ನೀಡಿದ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯದಲ್ಲಿ ನೆರೆ ಬಂದು ಜನ ತತ್ತರಿಸಿ ಸಹಾಯಕ್ಕಾಗಿ ಕೇಂದ್ರಕ್ಕೆ ಮೊರೆ ಇಟ್ಟು ಆಗಿನ ಸಿಎಂ ಆಗಿದ್ದ ಯಡಿಯೂರಪ್ಪನವರು ಪ್ರಧಾನಿ ಭೇಟಿಗೆ ಅವಕಾಶ ಕೇಳಿದಾಗ ಪದೇ ಪದೇ ನಿರಾಕರಿಸಲಾಗಿತ್ತು. ಈಗ ಚುನಾವಣೆ ಸಂಧರ್ಭದಲ್ಲಿ ಮೋದಿ ಅವರಿಗೆ ಕರ್ನಾಟಕ ನೆನಪಾಗಿದೆ. ವಿಧಾನಸಭೆಯ ವಿದಾಯ ಭಾಷಣದ ನಂತರ ಯಡಿಯೂರಪ್ಪ ಮೇಲೆ ಅತಿಯಾದ ಪ್ರೀತಿ ಹುಟ್ಟಿದೆ ಎಂದು ಟೀಕಿಸಿದೆ.
ಹೊಗೆಯಿಂದಾದ ಮಹಿಳೆಯರ ಕಣ್ಣೀರು ಒರೆಸುತ್ತೇನೆ ಎಂದಿದ್ದ ಮೋದಿ ಈಗ ಸಿಲಿಂಡರ್ ಬೆಲೆ ಏರಿಕೆಯಿಂದ ಕಣ್ಣೀರು ತರಿಸಿದ್ದಾರೆ. ಗ್ಯಾಸ್ ಬೆಲೆ ₹1000 ದಾಟಿದೆ, ಗ್ರಾಮೀಣ ಜನತೆ ಕಟ್ಟಿಗೆಯ ಮೊರೆ ಹೋಗಿದ್ದಾರೆ, ಈಗ ಮಹಿಳೆಯರ ಕಣ್ಣೀರು ಕಾಣದೇ? ಬೆಲೆ ಏರಿಕೆ ಪ್ರಶ್ನಿಸುವವರು ಪಾಕಿಸ್ತಾನಕ್ಕೆ ಹೋಗಿ ಎನ್ನುವ ಬಿಜೆಪಿಗರು ಉತ್ತರಿಸಬಹುದೇ ಎಂದು ಕಾಂಗ್ರೆಸ್ ಗುಡುಗಿದೆ.
ಸರ್ಕಾರಿ ನೌಕರರು ಮುಷ್ಕರ ಹೂಡಲು ತಯಾರಾಗಿದ್ದಾರೆ. ಆಡಳಿತ ಯಂತ್ರ ಅಕ್ಷರಶಃ ಸ್ಥಗಿತಗೊಂಡು ಜನಸಾಮಾನ್ಯರು ಪರದಾಡುವಂತಾಗುತ್ತದೆ. ಈ ಮುಷ್ಕರ ನಿಭಾಯಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ನೌಕರರ ಮನವೊಲಿಸಲು ಪ್ರಯತ್ನಿಸುತ್ತಿಲ್ಲ. ಕೈಲಾಗದ ಸಿಎಂ ಕೈಚೆಲ್ಲಿ ಕುಳಿತಿದ್ದಾರೆ. ರಾಜ್ಯ ಅರಾಜಕತೆಗೆ ಸಾಗಿದೆ ಎಂದು ಕಾಂಗ್ರೆಸ್ ಕುಟುಕಿದೆ.