ನ್ಯೂಯಾರ್ಕ್: ಮೂರು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಟೆಸ್ಲಾ ಕಂಪನಿ ಸಿಇಒ, ಟ್ವೀಟರ್ ಮಾಲೀಕ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿದ್ದು, ನಾನು ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದೇನೆ ಎಂದು ಮಸ್ಕ್ ತಿಳಿಸಿದ್ದಾರೆ.
“ಪ್ರಧಾನಿ ಮೋದಿ ಅವರೊಂದಿಗಿನ ಅದ್ಭುತ ಮಾತುಕತೆಯಾಗಿದ್ದು, ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಹಾಗಾಗಿ ನಾವು ಅಪರಿಚಿತರಲ್ಲ. ಭಾರತದ ಭವಿಷ್ಯದ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ. ಜಗತ್ತಿನ ಎಲ್ಲಾ ದೇಶಕ್ಕಿಂತಲೂ ಭಾರತವು ಹೆಚ್ಚು ಭರವಸೆಯ ರಾಷ್ಟ್ರವಾಗಿದೆ ಎಂದು ಭಾವಿಸುತ್ತೇನೆ” ಎಂದು ಮಸ್ಕ್ ಶ್ಲಾಘಿಸಿದ್ದಾರೆ.
ಭಾರತದಲ್ಲಿ ಟೆಸ್ಲಾ ಕಂಪನಿ ಆರಂಭಿಸುವ ಯೋಜನೆ ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಲಾನ್ ಮಸ್ಕ್ ಅವರು, ಖಂಡಿತವಾಗಿಯೂ ಟೆಸ್ಲಾ ಭಾರತದಲ್ಲಿ ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ದೇಶದ(ಭಾರತ) ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಅಷ್ಟೇ ಅಲ್ಲ ಭಾರತದಲ್ಲಿ ಹೂಡಿಕೆ ಮಾಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ನಾವು ಆ ನಿಟ್ಟಿನಲ್ಲಿ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಮಸ್ಕ್ ಹೇಳಿದರು.
2015ರ ಅಮೆರಿಕದ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಲಿಫೋರ್ನಿಯಾದಲ್ಲಿರುವ ಟೆಸ್ಲಾ ಮೋಟಾರ್ಸ್ ಫ್ಯಾಕ್ಟರಿಗೆ ಭೇಟಿ ನೀಡಿದ್ದರು.