ಮೈಸೂರು (Mysuru): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.
ದೇವಾಲಯಕ್ಕೆ ಆಗಮಿಸಿದ ಮೋದಿ ಅವರನ್ನು ದೇವಾಲಯದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಸುತ್ತೂರು ಕಾರ್ಯಕ್ರಮದ ಬಳಿಕ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಅವರು, ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ಸಂಕಲ್ಪ ಪೂಜೆ ಸಲ್ಲಿಸಿದರು.
ಇದೇ ಮೊದಲ ಬಾರಿಗೆ ಪ್ರಧಾನಿಯವರು ಚಾಮುಂಡೇಶ್ವರಿಯ ದರ್ಶನ ಪಡೆದರು. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಶಯದಂತೆ ಸಂಕಲ್ಪ ಪೂಜೆ ನೆರವೇರಿಸಿದರು. ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ಅವರು ಮೋದಿ ಅವರ ಕೈಯಲ್ಲಿ ಸಂಕಲ್ಪ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಚಾಮುಂಡಿ ದರ್ಶನ ಪಡೆದ ಬಳಿಕ ಮೋದಿಯವರು ಮೈಸೂರಿನ ರ್‍ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆ ಅರಮನೆ ಮುಂಭಾಗ ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅರಮನೆಯಲ್ಲಿ ರಾಜವಂಶಸ್ಥರೊಂದಿಗೆ ಉಪಹಾರ ಸೇವಿಸಲಿದ್ದಾರೆ.