ಮನೆ ರಾಜ್ಯ ಮೈಸೂರಿನಲ್ಲಿ ಪ್ರಧಾನಿ ಮೋದಿ ಯೋಗ: ಯೋಗದಿಂದ ವಿಶ್ವ ಶಾಂತಿ

ಮೈಸೂರಿನಲ್ಲಿ ಪ್ರಧಾನಿ ಮೋದಿ ಯೋಗ: ಯೋಗದಿಂದ ವಿಶ್ವ ಶಾಂತಿ

0

ಮೈಸೂರು (Mysuru): ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಅರಮನೆಯ ಆವರಣದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿಯೊಂದಿಗೆ ಯೋಗ ಮಾಡಿದರು.

ಯೋಗಾಭ್ಯಾಸ ಮಾಡಲು ಅನುಕೂಲವಾಗುವಂತೆ ಬಿಳಿ ಬಣ್ಣದ ಶರ್ಟ್‌, ಪೈಜಾಮಾ ಧರಿಸಿ ಆಗಮಿಸಿದ್ದ ಪ್ರಧಾನಿ ಮೋದಿ, ಸಾವಿರಾರು ಜನರ ನಡುವೆ ಕುಳಿತು ಯೋಗದ ವಿವಿಧ ಭಂಗಿಗಳನ್ನು ಅಭ್ಯಾಸ ಮಾಡಿದರು. 

ಇದಕ್ಕೂ ಮುನ್ನ ನರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಜನತೆಗೆ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು. ಈ ಸಂದರ್ಭದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ನನ್ನ ಪ್ರಣಾಮಗಳು. ಯೋಗ ಎನ್ನುವುದು ಇಂದು ವಿಶ್ವದಾದ್ಯಂತ ಜನಪ್ರಿಯವಾಗಿದೆ ಎಂದರು.

ನಮ್ಮ ಬದುಕಿಗೆ ವಿಶ್ವಾಸ ತುಂಬಿರುವುದೇ ಯೋಗ. ಇಡೀ ವಿಶ್ವಕ್ಕೆ ಪಸರಿಸಿರುವ ಯೋಗದಿಂದಲೇ ಶಾಂತಿ, ನೆಮ್ಮದಿಯ ಜತೆಗೆ ದೇಶಗಳ ನಡುವಿನ ಬಾಂಧವ್ಯಕ್ಕೆ ನಾಂದಿ ಹಾಡಿದೆ. ಯೋಗವು ಇಂದು ವಿಶ್ವದಾದ್ಯಂತ ವ್ಯಾಪಿಸಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ಇಂದು ಯೋಗಾಭ್ಯಾಸ ಮಾಡಲಾಗುತ್ತಿದೆ. ಯೋಗದಿಂದ ವಿಶ್ವದ ಜನರೆಲ್ಲ ನಿರೋಗಿಯಾಗಿರಲು ಸಾಧ್ಯವಿದೆ ಎಂದು ಮೋದಿ ಹೇಳಿದರು.

ಯೋಗದಿಂದ ವಿಶ್ವ ಶಾಂತಿ ಸಾಧ್ಯವಿದೆ. ಈ ವರ್ಷದ ಯೋಗ ದಿನದ ಧ್ಯೇಯವೂ ಇದಕ್ಕೆ ಪೂರಕವಾಗಿಯೇ ಇದೆ. ನಮ್ಮ ಪೂರ್ವಜನರು, ಋಷಿ–ಮುನಿಗಳು ಯೋಗದಿಂದ ವಿಶ್ವಕ್ಕೆ ಶಾಂತಿ ಎಂದು ಪ್ರತಿಪಾದಿಸಿದ್ದರು. ಭಾರತ ಎಂದಿಗೂ ವಿಶ್ವದ ಶಾಂತಿಯನ್ನು ಬಯಸಿದ ದೇಶ. ಯೋಗದಿಂದ ಸಮಾಜಕ್ಕೆ, ವಿಶ್ವಕ್ಕೆ ಒಳಿತಾಗಲಿದೆ ಎಂದು ಮೋದಿ ಹೇಳಿದರು.

ಯೋಗ ಮಾರ್ಗದಲ್ಲಿ ಮುಂದುವರಿಯುವುದರಿಂದ ನೆಮ್ಮದಿ ಇದೆ. ನಾವೆಲ್ಲ ಯೋಗದ ಹಾದಿಯಲ್ಲಿ ಸಾಗೋಣ. ಯೋಗದಿಂದ ಉಂಟಾಗುವ ನೆಮ್ಮದಿಯ ಭಾವವನ್ನು ಸಂಭ್ರಮಿಸೋಣ ಎಂದು ಪ್ರಧಾನಿ ಕರೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರಿನ ಯೋಗ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮೆರುಗು ಹೆಚ್ಚಿಸಿದ್ದಾರೆ ಎಂದರು.

ಯೋಗ ದಿನಾಚರಣೆಯ ಜನಪ್ರಿಯತೆಯಲ್ಲಿ ಮೋದಿ ಅವರ ಪಾತ್ರ ಬಹಳ ದೊಡ್ಡದಾಗಿದೆ. ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಅವರು ಇಲ್ಲಿಗೆ ಬರುವ ಮೂಲಕ ವಿಶ್ವ ಮಟ್ಟದಲ್ಲಿ ಮೈಸೂರು ಗಮನ ಸೆಳೆಯುವಂತೆ ಮಾಡಿದ್ದಾರೆ. ಯೋಗದಿಂದ ವಿಶ್ವವನ್ನು ಒಂದುಗೂಡಿಸಬಹುದು ಎಂಬ ಸಂದೇಶ ಸಾರಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಕಾರ್ಯಕ್ರಮದಲ್ಲಿ ರಾಜವಂಶಸ್ಥರಾದ ಡಾ.ಪ್ರಮೋದಾ ದೇವಿ ಒಡೆಯರ್‌, ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವರಾದ ಸರ್ಬಾನಂದ ಸೋನಾವಾಲಾ, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್‌ ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಅವರೊಂದಿಗೆ ಬೊಮ್ಮಾಯಿ, ಎಸ್.ಟಿ.ಸೋಮಶೇಖರ್‌, ಡಾ.ಕೆ.ಸುಧಾಕರ್‌, ಸರ್ಬಾನಂದ ಸೋನಾವಾಲಾ ಅವರು ಯೋಗ ಮಾಡಿದರು.