ಅಪ್ರಾಪ್ತ ವಯಸ್ಕ ಅತ್ಯಾಚಾರ ಸಂತ್ರಸ್ತೆಯ ಹೆಸರು, ವಿಳಾಸ ಹಾಗೂ ಛಾಯಾಚಿತ್ರವನ್ನು ಮಾಧ್ಯಮಗಳಿಗೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಚಿವ ಡಾ ಇರ್ಫಾನ್ ಅನ್ಸಾರಿ ಅವರ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಲು ಜಾರ್ಖಂಡ್ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ .
ವಿಚಾರಣಾ ನ್ಯಾಯಾಲಯ 2022 ರಲ್ಲಿ ಐಪಿಸಿ ಸೆಕ್ಷನ್ 228-ಎ, ಬಾಲಾಪರಾಧ ಕಾಯಿದೆ ಸೆಕ್ಷನ್ 74 (1) (3) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 23ರ ಅಡಿಯಲ್ಲಿ ಜಮ್ತಾರಾ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಅನ್ಸಾರಿ ಅವರ ವಿರುದ್ಧ ಆರೋಪ ನಿಗದಿಪಡಿಸಿತ್ತು. ಈ ಸೆಕ್ಷನ್‌ಗಳು ಅಪ್ರಾಪ್ತ ವಯಸ್ಕ ಲೈಂಗಿಕ ಅಪರಾಧ ಸಂತ್ರಸ್ತರ ಗುರುತು ಬಹಿರಂಗಪಡಿಸುವುದನ್ನು ನಿಷೇಧಿಸುತ್ತವೆ.
ಆರೋಪ ನಿಗದಿಪಡಿಸಿದ್ದನ್ನು ಪ್ರಶ್ನಿಸಿ ಅನ್ಸಾರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ನೀಡಿದ ನ್ಯಾಯಮೂರ್ತಿ ಅರುಣ್ ಕುಮಾರ್ ರಾಯ್, ಸಂತ್ರಸ್ತರ ಹೆಸರನ್ನು ಮುದ್ರಣ, ಎಲೆಕ್ಟ್ರಾನಿಕ್, ಸಾಮಾಜಿಕ ಮಾಧ್ಯಮ, ಇತ್ಯಾದಿ ಯಾವುದೇ ರೂಪದಲ್ಲಿ ಬಹಿರಂಗಪಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು ಹಾಗೆ ಮಾಡುವುದು ಅಪರಾಧ ಎಂದರು.
ಪೋಕ್ಸೊ, ಬಾಲಾಪರಾಧ ಕಾಯಿದೆಯಡಿಯ ಅಪರಾಧಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಈಗಾಗಲೇ ಈ ನಿರ್ಬಂಧ ಅನ್ವಯಿಸಲಾಗಿದ್ದು ವಾಟ್ಸಾಪ್ ಗ್ರೂಪ್ ಕೂಡ ಈ ಕಾಯಿದೆಗಳ ಮಾಧ್ಯಮ ವ್ಯಾಖ್ಯಾನದಡಿ ಬರುತ್ತದೆ ಎಂದು ನ್ಯಾಯಾಲಯ ತಿಳಿಸಿತು.
ಅತ್ಯಾಚಾರಕ್ಕೀಡಾಗಿದ್ದ ಅಪ್ರಾಪ್ತ ವಯಸ್ಸಿನ ಮಗುವಿನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಲೆಂದು 2018 ರಲ್ಲಿ ತನ್ನ ಬೆಂಬಲಿಗರೊಂದಿಗೆ ಆಕೆಯನ್ನು ಭೇಟಿಯಾಗಿದ್ದ ಅನ್ಸಾರಿ ಆಕೆಯ ವಿವರ ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದರು. ಮತ್ತು ತಮ್ಮ ಭೇಟಿ ಕುರಿತ ಪತ್ರಿಕಾ ಪ್ರಕಟಣೆಯ ವೇಳೆ ಸಂತ್ರಸ್ತೆಯ ಮಾಹಿತಿ ಪ್ರಕಟಿಸಿದ್ದರು.
ಕುತೂಹಲದ ಸಂಗತಿ ಎಂದರೆ ಶಾಸಕರ ಫೋನ್‌ನಿಂದ ಸಂದೇಶ ಕಳಿಸಿದ್ದ ಅನ್ಸಾರಿ ಅವರ ಕಾರ್ಯದರ್ಶಿ ವಿರುದ್ಧ ಮಾತ್ರ ಪೊಲೀಸರು ಆರಂಭದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಆದರೆ ಅನ್ಸಾರಿ ಅವರ ವಿರುದ್ಧವೂ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸಿತ್ತು.
ಅನ್ಸಾರಿ ಅವರ ಕಾರ್ಯದರ್ಶಿ,ಶಾಸಕರ ಮೊಬೈಲ್‌ನಿಂದ ಸಂದೇಶ ಮತ್ತು ಛಾಯಾಚಿತ್ರ ಕಳುಹಿಸಿರುವುದಾಗಿ ಒಪ್ಪಿಕೊಂಡಿದ್ದರೂ, “ಅಪರಾಧ ಹೊಣೆಗಾರಿಕೆಯನ್ನು ಈ ಹಂತದಲ್ಲಿ ವರ್ಗಾಯಿಸಲಾಗುವುದಿಲ್ಲ ಮತ್ತು ವರ್ಗಾಯಿಸಬಾರದು ಮತ್ತು ಈ ಬಗೆಗಿನ ಸತ್ಯಾಂಶ ಪರಿಶೀಲಿಸಲು ಕೂಡ ವಿಚಾರಣೆಯ ಅಗತ್ಯವಿದೆ” ಎಂದ ನ್ಯಾಯಾಲಯ ಅನ್ಸಾರಿ ಅವರ ವಿರುದ್ಧದ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.