ಮನೆ ಕಾನೂನು ಪೋಕ್ಸೋ ಪ್ರಕರಣ:  ವಿಚಾರಣೆಗೆ ಹಾಜರಾಗಲು ಬಿ ಎಸ್ ಯಡಿಯೂರಪ್ಪಗೆ ಸಮನ್ಸ್

ಪೋಕ್ಸೋ ಪ್ರಕರಣ:  ವಿಚಾರಣೆಗೆ ಹಾಜರಾಗಲು ಬಿ ಎಸ್ ಯಡಿಯೂರಪ್ಪಗೆ ಸಮನ್ಸ್

0

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ 1 ನೇ ತ್ವರಿತಗತಿ ನ್ಯಾಯಾಲಯ ಮಾರ್ಚ್ 15ರಂದು ನಿಗದಿಪಡಿಸಿದೆ. ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಆರೋಪಪಟ್ಟಿಯ ವಿಚಾರಣೆಗೆ ಕೋರ್ಟ್ ಸಮ್ಮತಿಸಿದ್ದು, ಮಾರ್ಚ್ 15 ರಂದು ಖುದ್ದಾಗಿ ಹಾಜರಾಗುವಂತೆ ಬಿಎಸ್ ಯಡಿಯೂರಪ್ಪ ಹಾಗೂ ಇತರ ಆರೋಪಿಗಳಿಗೆ ಸಮನ್ಸ್ ನೀಡಿದೆ.

Join Our Whatsapp Group

ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ಕೆಲವೇ ದಿನಗಳ ಹಿಂದಷ್ಟೇ ಕರ್ನಾಟಕ ಹೈಕೋರ್ಟ್​ನಲ್ಲಿ ರಿಲೀಫ್ ದೊರೆತಿತ್ತು. ಪ್ರಕರಣ ರದ್ದತಿ ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಧಾರವಾಡ ಪೀಠ, ನಿರೀಕ್ಷಣಾ ಜಾಮೀನು ನೀಡಿತ್ತು. ಆದರೆ, ಪ್ರಕರಣ ರದ್ದು ಮಾಡಲು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ನಿರಾಕರಿಸಿತ್ತು. ಹೀಗಾಗಿ ಯಡಿಯೂರಪ್ಪ ಬಂಧನದಿಂದ ಪಾರಾದರೂ ವಿಚಾರಣೆ ಎದುರಿಸಲೇಬೇಕಾಗಿದೆ. ಆದ್ದರಿಂದ ಇದೀಗ ಬೆಂಗಳೂರಿನ ನ್ಯಾಯಾಲಯ ವಿಚಾರಣೆಗೆ ದಿನ ನಿಗದಿಪಡಿಸಿದೆ.

ಪ್ರಕರಣದ ಹಿನ್ನೆಲೆ

ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ 2024 ರ ಮಾರ್ಚ್​ನಲ್ಲಿ ಕೇಳಿಬಂದಿತ್ತು. ಸಂತ್ರಸ್ತೆಯ ತಾಯಿ ಈ ಆರೋಪ ಮಾಡಿದ್ದರು. ಬಳಿಕ ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಏನು ಹೇಳಿದ್ದರು ಸಂತ್ರಸ್ತೆಯ ತಾಯಿ?

ಸಹಾಯ ಕೇಳಲು ಹೋಗಿದ್ದಾಗ ತನ್ನ ಮಗಳಿಗೆ ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸಂತ್ರಸ್ತೆಯು ದೂರಿನಲ್ಲಿ ಉಲ್ಲೇಖಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ಧ ಸದಾಶಿವನಗರ ಠಾಣೆಗೆ ದೂರು ನೀಡಲಾಗಿತ್ತು.

ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಯಡಿಯೂರಪ್ಪ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಪೋಕ್ಸೋ ಹಾಗೂ 354 (A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದು ಕೆಲವು ದಿನಗಳ ಮಟ್ಟಿಗೆ ರಾಜಕೀಯವಾಗಿಯೂ ಸದ್ದು ಮಾಡಿತ್ತು. ಏತನ್ಮಧ್ಯೆ, ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ದೂರುದಾರೆ 2024ರ ಮೇ ತಿಂಗಳಲ್ಲಿ ಮೃತಪಟ್ಟಿದ್ದರು.

ಇದೀಗ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿರುವುದರಿಂದ ಯಡಿಯೂರಪ್ಪನವರು ಮತ್ತೆ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.