ಮನೆ ಅಪರಾಧ ಹಲ್ಲೆಗೊಳಗಾದ ನಿರ್ವಾಹಕನ ವಿರುದ್ಧವೇ POCSO ಪ್ರಕರಣ ದಾಖಲು: ಕನ್ನಡಪರ ಸಂಘಟನೆಗಳ ಪ್ರತಿಭಟನೆ

ಹಲ್ಲೆಗೊಳಗಾದ ನಿರ್ವಾಹಕನ ವಿರುದ್ಧವೇ POCSO ಪ್ರಕರಣ ದಾಖಲು: ಕನ್ನಡಪರ ಸಂಘಟನೆಗಳ ಪ್ರತಿಭಟನೆ

0

ಬೆಳಗಾವಿ: ಮರಾಠಿ ಮಾತನಾಡದ ನಿರ್ವಾಹಕನ ಮೇಲೆ ಪುಂಡರು ಹಲ್ಲೆ ನಡೆಸಿದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಈ ಬಾರಿ ಹಲ್ಲೆಗೊಳಗಾದ ನಿರ್ವಾಹಕನ ವಿರುದ್ಧವೇ POCSO ಪ್ರಕರಣ ದಾಖಲಿಸಲಾಗಿದೆ.

Join Our Whatsapp Group

ಬೆಳಗಾವಿಯ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಈಗ ನಿರ್ವಾಹಕ ಮಹಾದೇವ್‌ ಹುಕ್ಕೇರಿ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

ಬಸ್‌ ನಲ್ಲೇ ಕೆಟ್ಟ ದೃಷ್ಟಿಯಿಂದ ನೋಡಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಾರಿಹಾಳ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕನ್ನಡ ಮಾತನಾಡಿ ಎಂದಿದ್ದಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಮಹಾದೇವ್‌ ಆರೋಪಿಸಿದ್ದರು. ಆ ದೂರನ್ನಾಧರಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆ ಇಂದು ನಸುಕಿನ ಜಾವ 2:30ರ ವೇಳೆಗೆ ಬಾಲಕಿಯಿಂದ ದೂರು ದಾಖಲಾಗಿದೆ. ಪೋಕ್ಸೋ ಬಗ್ಗೆ ಶುಕ್ರವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲೂ ಪ್ರಸ್ತಾಪವೇ ಆಗಿಲ್ಲ. ಆದರೆ ನಿರ್ವಾಹಕ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ರಾತ್ರೋರಾತ್ರಿ ಪೋಕ್ಸೋ ಪ್ರಕರಣ ದಾಖಲಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.

ಇನ್ನು ನಿರ್ವಾಹಕನ ವಿರುದ್ಧವೇ ಪೋಕ್ಸೋ ಪ್ರಕರಣ ದಾಖಲಿಸಿರುವ ಕ್ರಮವನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ತಮ್ಮ ಪ್ರತಿಭಟನೆ ತೀವ್ರಗೊಳಿಸಿದ್ದು, ತುಂಬಿದ್ದ ಬಸ್‌ನಲ್ಲಿ ಬಾಲಕಿಯನ್ನ ಕೆಟ್ಟ ದೃಷ್ಟಿಯಿಂದ ನೋಡಲು ಹೇಗೆ ಸಾಧ್ಯ ಎಂದು ಪ್ರತಿಭಟನಾ ನಿರತ ಕನ್ನಡಪರ ಹೋರಾಟಗಾರರು ಪ್ರಶ್ನಿಸಿದ್ದಾರೆ.

ನನಗೂ ಮಗಳಿದ್ದಾಳೆ ಎಂದ ಸಂತ್ರಸ್ಥ ನಿರ್ವಾಹಕ

ಇನ್ನು ಪೋಕ್ಸೋ ಪ್ರಕರಣದ ಕುರಿತು ಮಾತನಾಡಿರುವ ನಿರ್ವಾಹಕ ಮಹಾದೇವ್, ‘ನನಗೆ ದೂರು ನೀಡಿದ ಹುಡುಗಿಯಷ್ಟು ಪ್ರಾಯದ ಮಗಳಿದ್ದಾಳೆ. ಪ್ರಕರಣದ ದಿಕ್ಕು ತಪ್ಪಿಸಲು ನನ್ನ ಮೇಲೆ ಸುಳ್ಳು ಕೇಸ್‌ ದಾಖಲಿಸಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ?

ಬೆಳಗಾವಿ-ಸುಳೇಬಾವಿ ಮಾರ್ಗಮಧ್ಯೆ ಸಂಚರಿಸುವ ಕರ್ನಾಟಕ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಟಿಕೆಟ್‌ ತೆಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಯುವತಿ-ಯುವಕ ಬಸ್ ಹತ್ತಿದ್ದಾಗ ಯುವತಿಗೆ ಫ್ರೀ ಟಿಕೆಟ್ ನೀಡಿ ಯುವಕನಿಗೆ ಹಣ ಕೊಟ್ಟ ಟಿಕೆಟ್ ಪಡೆಯುವಂತೆ ಮಹಾದೇವ್ ಹೇಳಿದ್ದರು. ಆದರೆ ಯುವಕ ಟಿಕೆಟ್‌ ಪಡೆದಿರಲಿಲ್ಲ. ಇದರಿಂದ ಇಬ್ಬರ ನಡುವೆ ಪರಸ್ಪರ ವಾಕ್ಸಮರ ನಡೆದಿತ್ತು. ಈ ವೇಳೆ ಯುವಕ ಹಲವರಿಗೆ ಕರೆ ಮಾಡಿ ಜನ ಕರೆಸಿ ನಿರ್ವಾಹಕರ ಮೇಲೆ ಹಲ್ಲೆ ಮಾಡಿಸಿದ್ದ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಹಾದೇವ್, ಈ ಸಂದರ್ಭದಲ್ಲಿ ಆಕೆ ಮರಾಠಿಯಲ್ಲಿ ಮಾತಾಡು, ಮರಾಠಿ ಕಲಿತುಕೊಳ್ಳಬೇಕು ಎಂದು ನನಗೆ ಮರಾಠಿಯಲ್ಲೇ ಬೈದಳು. ಮುಂದೆ ಬಾಳೇಕುಂದ್ರಿ ಕೆಎಚ್ ಬರುತ್ತಿದ್ದಂತೆ ಅವರ ಕಡೆಯ 20 ಜನರು ನನ್ನ ಮೇಲೆ ಹಲ್ಲೆ ಮಾಡಲು ಬಂದರು. ತಲೆ, ಮೈ, ಕೈಗೂ ಹೊಡೆದರು ಎಂದು ಹೇಳಿದ್ದಾರೆ.