ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿರುವುದರ ಕುರಿತು ಜನರು ದೂರು ನೀಡಲು ಮುಂದಾದರೆ ಎಫ್’ಐಆರ್ ದಾಖಲಿಸಲು ಹಿಂಜರಿಯದಂತೆ ಪೊಲೀಸರಿಗೆ ಗುರುವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಮತ್ತು ಅವುಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ರಸ್ತೆ ಗುಂಡಿ ಕುರಿತಾದ ಅಪಘಾತಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಪರಿಹಾರ ಕೋರಿ ಸಲ್ಲಿಸಿರುವ ಮನವಿಗಳ ವಿವರ ನೀಡುವಂತೆ ನ್ಯಾಯಾಲಯವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶಿಸಿದೆ.
ರಸ್ತೆಗುಂಡಿಯಿಂದ ಸಂಭವಿಸಿದ ಅಪಘಾತದ ಕುರಿತು ದೂರು ನೀಡಲು ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಪೊಲೀಸರು ಪ್ರತಿಕ್ರಿಯಿಸದಿರುವುದು ಮತ್ತು ದೂರು ದಾಖಲಿಸದ ಕುರಿತಾದ ಮಾಧ್ಯಮ ವರದಿಗಳನ್ನು ಪೀಠವು ಉಲ್ಲೇಖಿಸಿತು. ಅಪಘಾತದಿಂದ ಹಾನಿಯಾದ ಎಷ್ಟು ಮಂದಿ ಸಾರ್ವಜನಿಕರು ಪರಿಹಾರ ಕೋರಿ ಮನವಿ ಸಲ್ಲಿಸಿದ್ದಾರೆ ಮತ್ತು ಎಷ್ಟು ಪರಿಹಾರ ನೀಡಲಾಗಿದೆ ಎಂಬುದರ ಮಾಹಿತಿ ನೀಡಬೇಕು ಎಂದು ಬಿಬಿಎಂಪಿಗೆ ನ್ಯಾಯಾಲಯವು ನಿರ್ದೇಶಿಸಿದ್ದು, ಗೃಹ ಇಲಾಖೆಯನ್ನು ಪಕ್ಷಕಾರರನ್ನಾಗಿಸುವಂತೆ ಅರ್ಜಿದಾರರಿಗೆ ಪೀಠ ನಿರ್ದೇಶಿಸಿದೆ.
“ಗುಂಡಿಯುತ ರಸ್ತೆಗಳು ಮತ್ತು ರಸ್ತೆಗಳ ಕಳಪೆ ನಿರ್ವಹಣೆಯಿಂದ ಸಾರ್ವಜನಿಕರಿಗೆ ಗಂಭೀರ ಗಾಯ ಅಥವಾ ಸಾವು ಸಂಭಿಸಿರುವುದರ ಕುರಿತು ದೂರು ನೀಡಲು ಸಾರ್ವಜನಿಕರು ಮುಂದಾದರೂ ಬಹುತೇಕ ಸಂದರ್ಭದಲಿ ಪೊಲೀಸರು ಎಫ್’ಐಆರ್ ದಾಖಲಿಸಲು ಹಿಂಜರಿಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಜನರು ಸಂಬಂಧಿತ ಠಾಣೆಯಲ್ಲಿ ದೂರು ನೀಡಬಹುದಾಗಿದ್ದು, ತಾಂತ್ರಿಕ ಕಾರಣಗಳ ನೆಪವೊಡ್ಡಿ ಪೊಲೀಸರು ದೂರು ದಾಖಲಿಸಲು ಹಿಂಜರಿಯುವಂತಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಬಿಬಿಎಂಪಿ ಮತ್ತು ಗುತ್ತಿಗೆದಾರ ಕಂಪೆನಿಯು ರಸ್ತೆಗುಂಡಿ ಮುಚ್ಚಿರುವುದು ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿ ನೇಮಿಸಿ, ಸ್ವತಂತ್ರವಾಗಿ ಪರಿಶೀಲನೆ ನಡೆಸಿ ವರದಿ ನೀಡಲು ಕಳೆದ ವಿಚಾರಣೆಯಲ್ಲಿ ಬೆಂಗಳೂರಿನಲ್ಲಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಪ್ರಾದೇಶಿಕ ಅಧಿಕಾರಿಗೆ ಪೀಠವು ನಿರ್ದೇಶಿಸಿತ್ತು. ರಸ್ತೆಗಳನ್ನು ಪರಿಶೀಲಿಸಿ ವರದಿ ನೀಡಲು ಲೋಕೋಪಯೋಗಿ ಇಲಾಖೆಯ ಎರಡು ಗುಣಮಟ್ಟ ನಿಯಂತ್ರಣ ತಂಡಗಳನ್ನು ನೆರವು ನೀಡಲು ನೇಮಕ ಮಾಡಬೇಕು ಎಂದು ಸಹಾಯಕ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಕೋರಿದರು.
ಇದಕ್ಕೆ ಪೀಠವು 2022ರ ಡಿಸೆಂಬರ್ 23ರೊಳಗೆ ಅಗತ್ಯ ಸಹಕಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ಅಲ್ಲದೇ, ಇಂದಿನಿಂದ ಆರು ವಾರಗಳ ಒಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಈ ಮಧ್ಯೆ, ಯಂತ್ರದ ಮೂಲಕ ರಸ್ತೆ ಗುಂಡಿ ಮುಚ್ಚಲು ನೀಡಿದ್ದ ಗುತ್ತಿಗೆಯನ್ನು ಏಕಾಏಕಿ ವಜಾ ಮಾಡಿರುವುದನ್ನು ಪ್ರಶ್ನಿಸಿ ಅಮೆರಿಕನ್ ರೋಡ್ ಟ್ರಾನ್ಸ್’ಪೋರ್ಟ್ ಸರ್ವೀಸ್ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯ ಅನುಮತಿಸಿತು. ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು.