ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಬಳಿಕ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರನ್ನು ಅಮಾನತುಗೊಳಿಸಿದ ಸರ್ಕಾರ ಆದೇಶದ ವಿರುದ್ಧ ಮಡಿವಾಳ ಠಾಣೆಯ ಹೆಡ್ ಕಾನ್ಸ್‌ಟೇಬಲ್ ನರಸಿಂಹರಾಜು ರಾಜಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ.
ನರಸಿಂಹರಾಜು ಅವರು ಡಾ. ಬಿ. ಆರ್. ಅಂಬೇಡ್ಕರ್ ಅವರ ಫೋಟೋ ಹಿಡಿದಿದ್ದಲ್ಲದೆ, ಕಪ್ಪು ಪಟ್ಟಿಯನ್ನು ಧರಿಸಿ ರಾಜಭವನದ ಎದುರು ನಿಂತು ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಲು ಹೋಗಿದ್ದರು. ಅವರ ಮನವಿಯಲ್ಲಿ ಅಮಾನತಾದ ಆದೇಶವನ್ನು ರದ್ದುಪಡಿಸಿ, ಪೊಲೀಸ್ ಇಲಾಖೆಗೆ “ನೈತಿಕ ಸ್ಥೈರ್ಯ” ತುಂಬಬೇಕೆಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ವಿಧಾನಸೌಧ ಠಾಣೆಯ ಪೊಲೀಸರು ನರಸಿಂಹರಾಜು ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರ ಈ ಪ್ರತಿಭಟನೆ ಇದೀಗ ಪೊಲೀಸ್ ಇಲಾಖೆಯೊಳಗಿನ ಅಸಮಾಧಾನವನ್ನು ಹೊರಹಾಕಿದಂತಾಗಿದೆ.
ಜೂನ್ 5ರಂದು ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ನಿಯಂತ್ರಣ ತಪ್ಪಿದ ಜನಸಂದಣಿಯಿಂದ ಕಾಲ್ತುಳಿತ ಉಂಟಾಗಿ 11 ಜನರು ಸಾವನ್ನಪ್ಪಿದ ನಂತರ, ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಗಂಭೀರ ಕ್ರಮ ತೆಗೆದುಕೊಂಡಿತ್ತು. ಅಮಾನತಾದವರು:
- ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್
- ಅಡಿಷನಲ್ ಕಮಿಷನರ್ ವಿಕಾಸ್ ಕುಮಾರ್
- ಸೆಂಟ್ರಲ್ ಡಿಸಿಪಿ ಶೇಖರ್ ತೆಕ್ಕಣ್ಣನವರ್
- ಎಸಿಪಿ ಬಾಲಕೃಷ್ಣ
- ಇನ್‌ಸ್ಪೆಕ್ಟರ್ ಗಿರೀಶ್















