ಆರೋಪಿಗಳಿಗೆ ಕಿರುಕುಳ ನೀಡುವುದಕ್ಕೆ ಮತ್ತು ಆತ್ಮಹತ್ಯೆಯಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬದ ಭಾವೋದ್ರೇಕವನ್ನು ಶಮನಗೊಳಿಸಲು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಲಾಗಿದೆ ಎಂಬ ಆರೋಪವನ್ನು ಯಾಂತ್ರಿಕವಾಗಿ ಹೊರಿಸಲಾಗದು ಎಂಬುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಿರುಕುಳ ನೀಡದಂತೆ ತನಿಖಾ ಸಂಸ್ಥೆಗಳನ್ನು ಜಾಗೃತಗೊಳಿಸಬೇಕಿದೆ ಎಂದು ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿತು.
ಇದೇ ವೇಳೆ ವಿಚಾರಣಾ ನ್ಯಾಯಾಲಯಗಳು ಯಾಂತ್ರಿಕವಾಗಿ ಇಂತಹ ಪ್ರಕರಣಗಳಲ್ಲಿ ಆರೋಪ ನಿಗದಿ ಮಾಡಬಾರದು ಎಂದು ಅದು ಬುದ್ಧಿವಾದ ಹೇಳಿತು.
ತೊಂದರೆಗೀಡಾದ ಕುಟುಂಬದ ದುಃಖ ಶಮನಗೊಳಿಸಲೆಂದು ಈ ಸೆಕ್ಷನ್ ಅನ್ವಯಿಸುವಂತಿಲ್ಲ. ನಿತ್ಯ ಜೀವನದ ನೈಜತೆಯಿಂದ ಇದನ್ನು ದೂರ ಇಡುವಂತಿಲ್ಲ. ಆರೋಪಿಗಳು ಕಿರುಕುಳಕ್ಕೆ ತುತ್ತಾಗದಂತೆ ತನಿಖಾಸಂಸ್ಥೆಗಳು ಹಾಗೂ ಯಾಂತ್ರಿಕವಾಗಿ ಆರೋಪ ನಿಗದಿಯಾಗದಂತೆ ವಿಚಾರಣಾ ನ್ಯಾಯಾಲಯಗಳಯ ಸೆಕ್ಷನ್ 306 ರ ತೀರ್ಪುಗಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಕಿವಿಮಾತು ಹೇಳಿದೆ.
ಸೆಕ್ಷನ್ 306 ರ ಅಡಿಯಲ್ಲಿ ಆರೋಪಗಳನ್ನು ಸಾಬೀತುಪಡಿಸುವ ಮಿತಿ ಹೆಚ್ಚಿದೆ ಎಂದು ಪೀಠ ಈ ಸಂದರ್ಭದಲ್ಲಿ ತಿಳಿಸಿತು.