ದಾವಣಗೆರೆ : ದಾವಣಗೆರೆಯಲ್ಲಿ ನಡೆದಿರುವ ಭೀಕರ ಘಟನೆ ಇಡೀ ಜಿಲ್ಲೆಗೆ ಅಚ್ಚರಿ ಮೂಡಿಸಿದ್ದು, ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಹತ್ಯೆಯ ಪ್ರಮುಖ ಆರೋಪಿ ಚಾವಳಿ ಸಂತೋಷ್ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗೆ ಕಾಲಿಗೆ ಗುಂಡು ಹೊಡೆದು ನಿಯಂತ್ರಣದಲ್ಲಿ ತೆಗೆದುಕೊಳ್ಳಲಾಗಿದೆ.
ಇತ್ತೀಚೆಗಷ್ಟೆ ನಡೆದಿದ್ದ ಕಣುಮಾ ಸಂತೋಷ್ ಹತ್ಯೆ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಚಾವಳಿ ಸಂತೋಷ್ ಎಂದು ಗುರುತಿಸಲ್ಪಟ್ಟಿದ್ದಾನೆ. ತನಿಖೆಯ ಭಾಗವಾಗಿ, ಪೊಲೀಸರು ಬುಧವಾರ ಸ್ಥಳ ಮಹಜರ್‌ಗೆ ಅವನನ್ನು ಆವರಗೆರೆ ಹೈಸ್ಕೂಲ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು.
ಸ್ಥಳ ಮಹಜರ್ ವೇಳೆ, ಆರೋಪಿ ಚಾವಳಿ ಸಂತೋಷ್ ಹಠಾತ್ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಎಂದು ವರದಿಯಾಗಿದೆ. ಈ ವೇಳೆ ಸಿಟಿ ಡಿವೈಎಸ್ಪಿ ಶರಣ ಬಸವೇಶ್ವರ ಬಿ. ಅವರು ಹಾಗೂ ಅವರ ತಂಡ ತಕ್ಷಣ ಸ್ಪಂದಿಸಿ ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ತಿಳಿಸಿದರೂ, ಆರೋಪಿ ನಿಯಮ ಪಾಲನೆ ಮಾಡದೆ ಹಲ್ಲೆ ಮುಂದುವರಿಸಿದ್ದಾನೆ.
ಆರೋಪಿಯನ್ನು ನಿಯಂತ್ರಣಕ್ಕೆ ತರಲು ಡಿವೈಎಸ್ಪಿ ಶರಣ ಬಸವೇಶ್ವರ ಅವರು ಚಾವಳಿ ಸಂತೋಷನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವನು ಪೊಲೀಸ್ ಕಸ್ಟಡಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಣುಮಾ ಸಂತೋಷ್ ನ ಮರ್ಡರ್ ಮಾಡಲು ಉಪಯೋಗಿಸಿದ್ದ ಮೊಬೈಲ್ ನ್ನು ಆವರಗೆರೆ ಬಳಿಯ ಪ್ರದೇಶವೊಂದರ ಬಳಿ ಆರೋಪಿಗಳು ಎಸೆದು ಪರಾರಿ ಆಗಿದ್ದರು. ಇದೀಗ ಸ್ಥಳ ಮಹಜರ್ ಮೂಲಕ ಈ ಮಾಹಿತಿಗೆ ದೃಢತೆ ದೊರೆತಿದೆ.














