ವಿಜಯಪುರ: ನಗರದಲ್ಲಿ ದರೋಡೆಕೋರರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ, ಮಧ್ಯಪ್ರದೇಶದ ಮೂಲದ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ನಾಲ್ವರು ದರೋಡೆಕೋರರು ಪರಾರಿಯಾಗಿದ್ದಾರೆ.
ಮಧ್ಯಪ್ರದೇಶ ಮೂಲದ ದರೋಡೆಕೋರ ಮಹೇಶ ಎಂಬಾತನ ಕಾಲಿಗೆ ಮೂರು ಗುಂಡುಗಳು ತಾಗಿವೆ. ಜಿಲ್ಲಾಸ್ಪತ್ರೆಗೆ ಆತನನ್ನು ಪೊಲೀಸರು ಸೇರಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್‌ಪಿ ಲಕ್ಷ್ಮಣ್ ನಿಂಬರಗಿ, ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ ಸೇರಿದಂತೆ ಇತರ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ವಿಜಯಪುರ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬುಧವಾರ ರಾತ್ರಿ ಜೈನಾಪುರ ನಗರದ ಸಂತೋಷ್ ಎಂಬುವರ ಮನೆಗೆ ನುಗ್ಗಿದ್ದ ಖದೀಮರು ಚಾಕುವಿನಿಂದ ದಾಳಿ ನಡೆಸಿ ದರೋಡೆ ಮಾಡಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತಂಡಗಳನ್ನು ಎಸ್ಪಿ ಲಕ್ಷ್ಮಣ್ ನಿಂಬರಗಿ ರಚನೆ ಮಾಡಿದ್ದರು. ಅಂತಾರಾಜ್ಯ ದರೋಡೆಕೋರರ ತಂಡ ನಗರದ ಹೊರಭಾಗದಲ್ಲಿ ಬೀಡು ಬಿಟ್ಟಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ಮಾಡಿದ್ದಾರೆ.
ನಸುಕಿನ ಜಾವದಿಂದಲೇ ಖಾಕಿ ಪಡೆ ಕಾರ್ಯಾಚರಣೆ ನಡೆಸಿತ್ತು. ಆಗ ಟೋಲ್ ಪ್ಲಾಜಾ ಬಳಿ ಹೆದ್ದಾರಿಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಐವರು ದರೋಡೆಕೋರರ ತಂಡವನ್ನು ಪೊಲೀಸರು ಬೆನ್ನಟ್ಟಿದ್ದರು. ಈ ವೇಳೆ ಬೈಕ್ ಅಲ್ಲೇ ಬಿಟ್ಟು ಜಮೀನಿನತ್ತ ದರೋಡೆಕೋರರು ಓಡಿದ್ದರು. ಇದರಿಂದ ವೇಳೆ ಗೋಳಗುಮ್ಮಟ ಠಾಣೆಯ ಸಿಪಿಐ ಮಲ್ಲಯ್ಯ ಮಠಪತಿ ಪಿಎಸ್ಐ ಘೋರಿ 5 ಸುತ್ತು ಗುಂಡು ಹಾರಿಸಿದ್ದಾರೆ.
ಗುಂಡು ಹಾರಿಸಿದರೂ ಸ್ಥಳದಿಂದ ಖದೀಮರು ಪರಾರಿಯಾಗಿದ್ದಾರೆ. ನಸುಕಿನಲ್ಲಿ ಕಣ್ಮರೆಯಾಗಿದ್ದ ಗ್ಯಾಂಗ್ ಶೋಧಕ್ಕಾಗಿ ಪೊಲೀಸರ ಶೋಧ ಮುಂದುವರೆಸಿದ್ದರು. ಈ ವೇಳೆ, ಪೊಲೀಸರ ಗುಂಡೇಟಿನಿಂದ ಜಮೀನಿನಲ್ಲಿ ಖದೀಮ ಬಿದ್ದಿದ್ದ ಎಂದು ತಿಳಿದು ಬಂದಿದೆ.














