ಬೆಂಗಳೂರು: ಸಿ.ಟಿ.ರವಿ ಪ್ರಕರಣ ಕೋರ್ಟ್ನಲ್ಲಿದೆ. ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡಿದ್ದೇವೆ ಅಂದಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಪ್ರಕರಣದಲ್ಲಿ ಪೊಲೀಸರು ಕಾನೂನು ಪ್ರಕಾರ ನಿರ್ವಹಿಸಿಲ್ಲ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಕರಣವು ಕೋರ್ಟ್ ನಲ್ಲಿದೆ. ಹಾಗಾಗಿ, ಯಾವುದೇ ಹೇಳಿಕೆ ನೀಡುವುದಿಲ್ಲ. ಈ ಬಗ್ಗೆ ಚರ್ಚೆ ಮಾಡೋದು ಸರಿಯಲ್ಲ. ಪೊಲೀಸರು ಸರಿಯಾದ ರೀತಿಯಲ್ಲಿ ಮಾಡಿದ್ದೇವೆ ಅಂತ ಹೇಳಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಮಾಹಿತಿ ಕೇಳಿದ್ದು, ಕೇಳದೇ ಜಡ್ಜ್‌ಮೆಂಟ್ ಬಂದಿದೆ ಅಂದಿದ್ದಾರೆ ಎಂದರು.
ಸದನದ ಒಳಗಿನ ಪ್ರಕರಣ, ಹೊರಗೆ ಕಾನೂನು ಕ್ರಮ ಸರಿಯೇ ಎಂಬ ಪ್ರಶ್ನೆಗೆ, ”ಕೆಲವರು ಮಾಧ್ಯಮದಲ್ಲಿ ತಾವೇ ವಾದ ಮಾಡಿದ್ದಾರೆ. ಸದನದಲ್ಲಿ ಕಲಾಪ ಮುಂದೂಡಿದ್ದಾಗ ಮಾತನಾಡಿದ್ದಾರೆ. ಹಾಗಾಗಿ, ದಾಖಲಾಗಿಲ್ಲ ಅಂತ ಕೆಲವರು, ಇಲ್ಲ ಇನ್ನೂ ಸದನ ನಡೆಯುತ್ತಿತ್ತು ಅಂತ ಕೆಲವರ ವಾದವಾಗಿದೆ” ಎಂದು ಹೇಳಿದರು.
ನಾಲ್ಕು ಜಿಲ್ಲೆಗಳಲ್ಲಿ ಇಡೀ ರಾತ್ರಿ ಸುತ್ತಿಸಿದ ಆರೋಪ ವಿಚಾರವಾಗಿ ಮಾತನಾಡಿ, ”ಅದರ ಮಾಹಿತಿ ಇಲ್ಲ. ಅದನ್ನೇ ಪೊಲೀಸರಿಂದ ಮಾಹಿತಿ ಕೇಳುತ್ತಿದ್ದೇನೆ. ಮಾಹಿತಿ ಬಂದ ಬಳಿಕ ತಿಳಿಸುತ್ತೇನೆ” ಎಂದರು. ”ಸುವರ್ಣಸೌಧದಲ್ಲಿ ಹಲ್ಲೆ ಮಾಡಲು ಮುಂದಾದ 24 ಜನರನ್ನು ಅಂದೇ ಬಂಧನ ಮಾಡಲಾಯಿತು. ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಯಾವುದೇ ಪ್ರಕರಣ ನಡೆಯಬಾರದು ಅಂತ ಮುನ್ನೆಚ್ಚರಿಕೆ ನೀಡಲಾಗಿದೆ. ಇಲ್ಲದಿದ್ದರೆ ಮತ್ತಷ್ಟು ದೊಡ್ಡ ಸಮಸ್ಯೆ ಆಗುತ್ತಿತ್ತು” ಎಂದು ತಿಳಿಸಿದರು.