ವಾಡಿ: ಕೈ ಚೀಲದಲ್ಲಿ ಹಾಕಿ ಮುಳ್ಳುಕಂಠಿಗಳ ನಡುವೆ ಎಸೆದು ಹೋದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಿ ಆಸ್ಪತ್ರೆಯಲ್ಲಿ ಪರದಾಡಿದ ಪ್ರಸಂಗ ಮಂಗಳವಾರ(ನ.5) ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ಹೆತ್ತ ಕೆಲವೇ ಕ್ಷಣದಲ್ಲಿ ತನ್ನ ಹಸುಗೂಸನ್ನು ನಾಯಿ ಹಂದಿಗಳಿರುವ ತಾಣದಲ್ಲಿ ಎಸೆದು ಹೋದ ಹೆತ್ತಮ್ಮಳೊಬ್ಬಳ ಮೃಗೀಯ ಮನಸ್ಥಿತಿ ಅನಾವರಣಗೊಂಡಿದ್ದು, ಜನಾಕ್ರೋಶಕ್ಕೆ ಗುರಿಯಾಗಿದೆ.
ಪಟ್ಟಣದ ರೆಸ್ಟ್ ಕ್ಯಾಂಪ್ ತಾಂಡಾದ ಜನವಸತಿ ಪ್ರದೇಶದ ಬಹಿರ್ದೆಸೆ ತಾಣದಲ್ಲಿ ಕೇಸರಿಬಾಯಿ ಎಂಬುವವರಿಗೆ ಹೆಣ್ಣು ಶಿಶು ಕಣ್ಣಿಗೆ ಬಿದ್ದಿದೆ. ತಕ್ಷಣ ಬಡಾವಣೆಯ ಆಶಾ ಕಾರ್ಯಕರ್ತೆ ಹಾಗೂ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ ಮಗುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಾಯ ಮಾಡಿದ್ದಾರೆ. ನಾಯಿ, ಹಂದಿಗಳ ಪಾಲಾಗುತ್ತಿದ್ದ ಶಿಶುವನ್ನು ರಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ತಂದರೆ ಅಲ್ಲಿ ವೈದ್ಯರು ಹಾಗೂ ನರ್ಸ್ ಗಳು ಇಲ್ಲದಿರುವುದು ಪೊಲೀಸರ ಪರದಾಟಕ್ಕೆ ಕಾರಣವಾಯಿತು. ನಂತರ ತಾಲೂಕ ಆರೋಗ್ಯ ಅಧಿಕಾರಿಯನ್ನು ಸಂಪರ್ಕಿಸಿದ ಪೊಲೀಸರು ಮಗುವಿನ ರಕ್ಷಣೆಗೆ ಮನವಿ ಮಾಡಿದರು.
ಬಳಿಕ ಬಂದ ವೈದ್ಯರು ಶಿಶುವಿನ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಪತ್ತೆಯಾದ ನವಜಾತ ಶಿಶುವನ್ನು ಕಲಬುರ್ಗಿ ಅಮೂಲ್ಯ ಶಿಶುವಿಹಾರಕ್ಕೆ ಕಳಿಸಿಕೊಡಲಾಗಿದ್ದು, ಮಗುವನ್ನು ದತ್ತು ಪಡೆಯಲು ಅನೇಕರು ಮುಂದೆ ಬಂದಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.