ಬೆಂಗಳೂರು: ಲೋಕಾಯುಕ್ತ ಎಸ್ಐಟಿ ಕೆಲಸಕ್ಕೆ ಅಡ್ಡಿಪಡಿಸಿದರೆ ಅವರದ್ದೇ ಆದ ಕೆಲವು ಕ್ರಮಗಳನ್ನು ಪೊಲೀಸ್‌ನವರೇ ತೆಗೆದುಕೊಳುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಇಂದು ಸದಾಶಿವನಗರ ನಿವಾಸದ ಬಳಿ ಹೆಚ್ಡಿಕೆ-ಎಡಿಜಿಪಿ ಚಂದ್ರಶೇಖರ್ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಕಾನೂನಾತ್ಮಕವಾಗಿ ಚಂದ್ರಶೇಖರ್ ನೇತೃತ್ವದ ಎಸ್ಐಟಿ ರಚನೆ ಮಾಡಲಾಗಿದೆ. ಅವರು ಅವರ ಕೆಲಸ ಮಾಡ್ತಾರೆ. ಕೆಲಸಕ್ಕೆ ಅಡ್ಡಿಪಡಿಸಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಚಂದ್ರಶೇಖರ್ ಪತ್ರದಲ್ಲಿ ಬರ್ನಾರ್ಡ್ ಷಾ ಹೇಳಿಕೆ ಕೋಟ್ ಮಾಡಿದ್ದಾರೆ. ಅದನ್ನು ಕುಮಾರಸ್ವಾಮಿಗೆ ರೆಫರ್ ಮಾಡಿ ಹೇಳಿಲ್ಲ. ನಮಗೇ ಹೇಳಿರೋದು ಅಂತ ಯಾಕೆ ತಗೋಬೇಕು?. ಗಾದೆ, ನಾಣ್ಣುಡಿ ಹೇಳಿದ್ರೆ ಅದು ನನಗೇ ಅನ್ವಯ ಅಂತ ಅಂದುಕೊಳ್ಳಲು ಆಗಲ್ಲ. ಹೇಗೆ ಬೇಕೋ ಹಾಗೆ ಅರ್ಥ ಮಾಡಿಕೊಳ್ಳಲು ಆಗಲ್ಲ ಎಂದರು.
ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್ ದಾಖಲು ವಿಚಾರವಾಗಿ ಮಾತನಾಡಿ, ಯಾರು ಯಾರ ಮೇಲೆ ಆರೋಪ ಮಾಡ್ತಾರೋ ಗೊತ್ತಿಲ್ಲ. ದಿನ ಬೆಳಗಾದರೆ ಇದೇ ಆಗಿದೆ. ಸಾರ್ವಜನಿಕ, ರಾಜಕೀಯ ಜೀವನ ಇಷ್ಟು ಕಲುಷಿತವಾದರೆ ಕಷ್ಟ ಎಂದು ವಿಷಾದಿಸಿದರು.
ಸರ್ಕಾರ ಉರುಳಿಸಲು 1,200 ಕೋಟಿ ರೂ ರೆಡಿಯಾಗಿದೆ ಎಂಬ ಯತ್ನಾಳ್ ಹೇಳಿಕೆಗೆ, ಸರ್ಕಾರ ಅಸ್ಥಿರಗೊಳಿಸಲು 1,000 ಕೋಟಿ ರೂ ಸಂಗ್ರಹಿಸಿರುವ ಬಗ್ಗೆ ಯತ್ನಾಳ್ ಅವರಿಗೇ ಕೇಳಬೇಕು. ಇದನ್ನು ಹೇಳಿರೋದು ಅವರೇ, ನಮಗೆ ಗೊತ್ತಿಲ್ಲ. ಎಲ್ಲಿಟ್ಟಿದ್ದಾರೆ ಆ ಹಣ ಅಂತ ತನಿಖೆ ಆಗಬೇಕು ಎಂದು ತಿಳಿಸಿದರು.
ಮುಡಾ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಸ್ನೇಹಮಯಿ ಅರ್ಜಿ ವಿಚಾರವಾಗಿ ಪ್ರತಿಕ್ರಿಯಿಸಿ, ನೋಡೋಣ ಕೋರ್ಟ್ ತೀರ್ಮಾನ ಏನು ಬರುತ್ತೆ ಅಂತ. ಮುಕ್ತ ಸಮ್ಮತಿ ವಾಪಸ್ ಪಡೆದಿರುವ ಸರ್ಕಾರದ ನಿರ್ಧಾರವನ್ನು ಗಮನಿಸಿಯೇ ಕೋರ್ಟ್ ಆದೇಶ ಮಾಡುತ್ತದೆ. ಬೇರೆ ರಾಜ್ಯಗಳು ಈ ತೀರ್ಮಾನ ತೆಗೆದುಕೊಂಡಿವೆ. ಕೋರ್ಟ್ ಇದನ್ನು ಪರಿಗಣಿಸಿಯೇ ಆದೇಶ ಕೊಡುತ್ತೆ ಎಂದರು.
ಜಿಗಣಿಯಲ್ಲಿ ಪಾಕ್ ಪ್ರಜೆ ಸೇರಿ ನಾಲ್ವರ ಬಂಧನ ವಿಚಾರವಾಗಿ ಮಾತನಾಡಿ, ನಮಗೆ ಬಂದ ಮಾಹಿತಿ ಪ್ರಕಾರ ಅವರು ನಾಲ್ಕೂ ಜನ ಹತ್ತು ವರ್ಷದಿಂದ ಭಾರತದಲ್ಲಿದ್ದಾರೆ. ಬೆಂಗಳೂರಿಗೆ ಬಂದು ಒಂದು ವರ್ಷ ಆಗಿದೆ. ಅವರನ್ನು ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೀತಿದೆ. ಹತ್ತು ವರ್ಷದಿಂದ ಅವರು ಇದ್ದರೆ, ಯಾಕೆ ಗುಪ್ತಚರಕ್ಕೆ ಗೊತ್ತಾಗಿಲ್ಲ?. ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಹೆಸರು ಬದಲಾಯಿಸಿಕೊಂಡು ರೆಸ್ಟೋರೆಂಟ್ ನಡೆಸ್ತಿದ್ದಾರೆ ಅಂತ ಮಾಹಿತಿ ಬಂದಿದೆ. ತನಿಖೆಯ ಬಳಿ ಎಲ್ಲ ಮಾಹಿತಿ ಗೊತ್ತಾಗಲಿದೆ ಎಂದು ಉತ್ತರಿಸಿದರು.