ಮೈಸೂರು: ಪ್ರಚಾರದ ವೇಳೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ರಾಜಕೀಯ ಪಕ್ಷಗಳು ಹಾಗೂ ಪ್ರತಿನಿಧಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಕೆ.ವಿ ರಾಜೇಂದ್ರ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಜಕೀಯ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜಕೀಯ ನಾಯಕರು ದೇಣಿಗೆ ಪಡೆಯುವ ಸಂದರ್ಭದಲ್ಲಿ ಸಂಗ್ರಹವಾಗುವ ಹಾಗೂ ನೇರವಾಗಿ ಹಣ ಪಡೆಯುವ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಬರುತ್ತಿದೆ. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ದೇವಸ್ಧಾನ ಒಳಗೆ ಪೂಜಾ ತಟ್ಟೆಗೆ ದುಡ್ಡು ಹಾಕಿದರೂ ಉಲ್ಲಂಘನೆಯಾಗುತ್ತದೆ. ಅದರ ಬದಲು ಹುಂಡಿಗೆ ಹಾಕಬಹುದು ಎಂದರು.
ರಾಜಕೀಯ ರಾಲಿ, ಸಮಾರಂಭ ಹಾಗೂ ವಾಹನ ಬಳಸಲು ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಒಬ್ಬ ಅಭ್ಯರ್ಥಿಯು 40 ಲಕ್ಷ ಖರ್ಚು ಮಾಡಲು ಅವಕಾಶವಿದೆ. ಪ್ರಚಾರದ ಪ್ರತಿಯೊಂದು ಖರ್ಚನ್ನು ಲೆಕ್ಕ ಇಡಬೇಕು. ಆನ್ ಲೈನ್ ಮೂಲಕವು ನಾಮ ಪತ್ರ ಸಲ್ಲಿಸಬಹುದಾಗಿದೆ. ಸ್ಟಾರ್ ಕ್ಯಾಪೈನರ್ ಪ್ರಚಾರ ಮಾಡುವಾಗ ಅಭ್ಯರ್ಥಿ ವೇದಿಕೆಯ ಮೇಲೆ ಇದ್ದರೆ ಅಥವಾ ಬ್ಯಾನರ್ ನಲ್ಲಿ ಅಭ್ಯರ್ಥಿಯ ಭಾವಚಿತ್ರ ಇದ್ದಾರೆ ವೆಚ್ಚ ಅಭ್ಯರ್ಥಿಯ ಲೆಕ್ಕಕ್ಕೆ ಹಾಕಲಾಗುತ್ತದೆ. ಕರ ಪತ್ರಗಳ ಮುದ್ರಣದಲ್ಲಿ ಮುದ್ರಣಗಳ ಸಂಖ್ಯೆ ಹಾಗೂ ಮುದ್ರಣದ ವಿಳಾಸ ಕಡ್ಡಾಯವಾಗಿ ಮುದ್ರಿಸಿರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಲಕ್ಷ್ಮೀಕಾಂತರೆಡ್ಡಿ , ಚುನಾವಣಾ ತಹಶೀಲ್ದಾರ್ ರಾಮಪ್ರಸಾದ್, ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಪ್ರತಿನಿಧಿಗಳು ಉಪಸ್ಥಿತರಿದ್ದರು.














