ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರಾವಳಿ ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ಪೊಲೀಸರು “ಗೂಂಡಾಗಿರಿ” ಮೂಲಕ ಕಾರ್ಯ ಮಾಡುತ್ತಿದ್ದಾರೆ, ಇದು ಕಾಂಗ್ರೆಸ್ ಸರ್ಕಾರದ ನೀಚ ರಾಜಕಾರಣದ ಭಾಗ ಎಂದು ಆರೋಪಿಸಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವಿಷಯವಾಗಿ ಸೋಮವಾರ ರಾತ್ರಿ ರಾಷ್ಟ್ರೀಯ ಮುಖಂಡರ ಜೊತೆ ಚರ್ಚೆ ಮಾಡಿದ್ದೇನೆ. ಇವತ್ತು ನಮ್ಮ ಸಂಸದರು, ಶಾಸಕರು ಪೊಲೀಸ್ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
“ಸಂಘದವರ ಮೇಲೆ ಎಫ್‌ಐಆರ್, ಹಿಂದೂ ಕಾರ್ಯಕರ್ತರ ಬಂಧನ, ಮಧ್ಯರಾತ್ರಿ ಕಾರ್ಯಕರ್ತರ ಮನೆಯ ಬಾಗಿಲು ತಟ್ಟಿ, ಅವರನ್ನು ವಿಚಾರಿಸುತ್ತಿದ್ದಾರೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವಾ? ಎಲ್ಲಿದ್ದೇವೆ ನಾವು ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ತಮ್ಮ ಪಕ್ಷದ ಸಂಸದರು ಹಾಗೂ ಶಾಸಕರು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ವಿಷಯ ಚರ್ಚಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ವಿಜಯೇಂದ್ರ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು “ತುಘಲಕ್ ದರ್ಬಾರ್” ಎಂದು ಹೆಸರಿಸಿ ಟೀಕಿಸಿದರು. ಆಗ ಪಾಳೇಗಾರರು ಇದ್ದ ಬಗ್ಗೆ ನಾವು ಕೇಳಿದ್ದೇವೆ. ರಾಜ ಮಹಾರಾಜರು ಹಿಂದೆ ನಮ್ಮ ದೇಶವನ್ನು ಆಳಿದ್ದರು. ಆ ಪಾಳೇಗಾರಿಕೆಯನ್ನು ಹಂಗಿಸುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುತ್ತಿದೆ. “ಇದು ಲಜ್ಜೆಗೇಡಾದ ಸರ್ಕಾರ. ಅಭಿವೃದ್ಧಿಯ ಹೆಸರಿನಲ್ಲಿ ಜನರನ್ನು ದಿಕ್ಕಿಲ್ಲದಂತೆ ಮಾಡಿ, ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ತಿರುಗಿಸಲು ಷಡ್ಯಂತ್ರಗಳು ನಡೆಯುತ್ತಿವೆ” ಎಂದರು.
ಹೇಮಾವತಿ ನದಿ ನೀರಿನ ಹಂಚಿಕೆ ಸಂಬಂಧ ರೈತರು ನಡೆಸುತ್ತಿರುವ ಹೋರಾಟವನ್ನು ಸರ್ಕಾರ ಪೊಲೀಸರ ಮೂಲಕ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. “ಯಾರಾದರೂ ಒಬ್ಬರೋ ಇಬ್ಬರೋ ಕಲ್ಲು ಹೊಡೆದಿದ್ದಾರೆಂಬ ಆರೋಪದಿಂದ ಸಾವಿರಾರು ರೈತರ ಹಕ್ಕುಗಳಿಗೆ ಧಕ್ಕೆಯಾಗಬಾರದು.
ದಕ್ಷಿಣ ಕನ್ನಡದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ ವಿಜಯೇಂದ್ರ, “ಅಲ್ಲಿ ಮಹಿಳೆಯರು ಕೊಲೆಗಡುಕರಿಗೆ ಸಹಕರಿಸುತ್ತಿರುವ ದೃಶ್ಯಗಳಿರುವ ವಿಡಿಯೋ ಇವೆ. ಆದರೆ ಪ್ರಕರಣವನ್ನು ನಿಭಾಯಿಸುವ ರೀತಿಯೇ ಅಸಮಾನ್ಯವಾಗಿದೆ. ಗೃಹ ಸಚಿವರನ್ನು ಸುಹಾಸ್ ಮನೆಗೆ ಹೋಗದಂತೆ ತಡೆಯಲಾಗಿದೆ. ಇದು ಏನು ಕರ್ತವ್ಯಕ್ಕೆ ಶೋಭೆ ತರುವ ಕ್ರಮವೇ?” ಎಂದು ಪ್ರಶ್ನಿಸಿದರು.
ಸುದ್ದಿಗಾರರ ಮುಂದೆ ತಮ್ಮ ಪಕ್ಷದ ಭವಿಷ್ಯ ಕ್ರಮಗಳತ್ತ ಸೂಚನೆ ನೀಡಿದ ವಿಜಯೇಂದ್ರ, “ಸರ್ಕಾರದ ಗೂಂಡಾ ನಡವಳಿಕೆಗೆ ಬಿಜೆಪಿ ಕೈಕಟ್ಟಿಕೊಂಡು ಕುಳಿತುಕೊಳ್ಳದು. ನಮ್ಮ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ನಾವು ಮರು ಉತ್ತರ ನೀಡುವ ಶಕ್ತಿ ಹೊಂದಿದ್ದೇವೆ” ಎಂದು ಎಚ್ಚರಿಕೆ ನೀಡಿದರು.














