ಮನೆ ಕಾನೂನು ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: ಎಲ್ಲಾ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ!

ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: ಎಲ್ಲಾ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ!

0

ಚೆನ್ನೈ: ತಮಿಳುನಾಡು ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೊನೆಗೂ ನ್ಯಾಯ ಜಯಭೇರಿ ಹಾಡಿದೆ. ಕೊಯಮತ್ತೂರಿನ ಮಹಿಳಾ ನ್ಯಾಯಾಲಯ ವಿಚಾರಣೆಯ ಬಳಿಕ ಇಂದು ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಎಲ್ಲಾ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಈ ತೀರ್ಪು 6 ವರ್ಷಗಳ ನಂತರ ಸಂತ್ರಸ್ತ ಮಹಿಳೆಯರಿಗೆ ಸಿಕ್ಕ ನೈತಿಕ ನ್ಯಾಯವೆಂದು ಹೇಳಬಹುದು. ಮಹಿಳಾ ನ್ಯಾಯಮೂರ್ತಿ ಆರ್. ನಂದಿನಿ ದೇವಿ ಅವರ ಪೀಠ ಈ ತೀರ್ಪು ನೀಡಿದ್ದು, ಸಂತ್ರಸ್ತರಿಗೆ ಒಟ್ಟಾರೆ ₹85 ಲಕ್ಷ ಪರಿಹಾರ ನೀಡಲು ಸಹ ಆದೇಶಿಸಿದೆ.

ಅಪರಾಧಿಗಳ ವಿವರ:

  1. ಕೆ. ತಿರುನಾವುಕ್ಕರಸು (34)
  2. ಎನ್. ರಿಶ್ವಂತ್ ಅಲಿಯಾಸ್ ಶಬರಿರಾಜನ್ (32)
  3. ಎಂ. ಸತೀಶ್ (33)
  4. ಟಿ. ವಸಂತ್ ಕುಮಾರ್ (30)
  5. ಆರ್. ಮಣಿವಣ್ಣನ್ (32)
  6. ಹರೋನ್ ಪಾಲ್ (32)
  7. ಪಿ. ಬಾಬು ಅಲಿಯಾಸ್ ಬೈಕ್ ಬಾಬು (33)
  8. ಕೆ. ಅರುಳಾನಂದಂ (39)
  9. ಎಂ. ಅರುಣ್‌ಕುಮಾರ್

2019ರಲ್ಲಿ ತಮಿಳುನಾಡಿನ ಪೊಲ್ಲಾಚಿಯಲ್ಲಿ ನಡೆದ ಈ ಪ್ರಕರಣದಲ್ಲಿ, ನೂರಕ್ಕಿಂತ ಹೆಚ್ಚು ಯುವತಿಯರನ್ನು ಲೈಂಗಿಕವಾಗಿ ಬಲಾತ್ಕರಿಸಿ, ಅದನ್ನು ವಿಡಿಯೋಗೆ ಎತ್ತಿ ಬೆದರಿಕೆಯ ಮೂಲಕ ಹಣ, ಆಭರಣಗಳು, ಮತ್ತು ಇನ್ನಿತರ ಸಂಪತ್ತು ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಘಟನೆಯು ಸಾಮಾಜಿಕ ಮಾಧ್ಯಮಗಳ ಮೂಲಕ ಬಹಿರಂಗವಾಗಿ ಬೆಳಕಿಗೆ ಬಂದು ತಮಿಳುನಾಡು ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ ಮನಸ್ಸುಗಳನ್ನು ತಲ್ಲಣಗೊಳಿಸಿತ್ತು.

ನ್ಯಾಯಾಲಯದ ತೀರ್ಪಿನಲ್ಲಿ, ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರೆತಿದೆ ಎಂಬ ಭರವಸೆಯನ್ನು ನೀಡಿದ್ದು, ಇಂತಹ ಕ್ರೂರ ಕೃತ್ಯಗಳು ಸಮಾಜದಲ್ಲಿ ನಿಲ್ಲಬೇಕು ಎಂಬ ದೃಢ ಸಂದೇಶ ನೀಡಿದೆ. 9 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದರ ಜೊತೆಗೆ, ₹85 ಲಕ್ಷ ಪರಿಹಾರವನ್ನು ಸಂತ್ರಸ್ತರಿಗೆ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.