ಶಿರಸಿ(Shirsi): ಮತ ಸೆಳೆಯಲು ಸುಳ್ಳು ಭರವಸೆ ನೀಡುವುದಿಲ್ಲ. ಉತ್ತಮ ಆಡಳಿತ ಒದಗಿಸುವ ಗ್ಯಾರಂಟಿ ಕಾರ್ಡ್ ನೀಡುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖ ರಾಜಕೀಯ ಪಕ್ಷಗಳು ಪ್ರತಿ ಚುನಾವಣೆಗೆ ಪ್ರತ್ಯೇಕ ಪ್ರಣಾಳಿಕೆ ರೂಪಿಸಿ ಜನರನ್ನು ನಂಬಿಸುತ್ತಿವೆ. ಆದರೆ ಆಪ್ ಪ್ರಣಾಳಿಕೆ ಬದಲು ಗ್ಯಾರಂಟಿ ಕಾರ್ಡ್ ನೀಡಿ ಮತ ಯಾಚಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ನಶಿಸಿದೆ. ಜೆಡಿಎಸ್ ಕೆಲವೆ ಸೀಟು ಗೆಲ್ಲಲು ಹವಣಿಸುತ್ತಿದೆ. ರಾಜ್ಯದಲ್ಲಿ ಆಪ್’ಗೆ ಬಿಜೆಪಿ ಮಾತ್ರ ನೇರ ಎದುರಾಳಿ. ಜೆ.ಸಿ.ಬಿ. (ಜನತಾ ದಳ, ಕಾಂಗ್ರೆಸ್, ಬಿಜೆಪಿ) ಓಡಿಸಲು ಪೊರಕೆ ಹಿಡಿದಿದ್ದೇವೆ. ರಾಜ್ಯದಲ್ಲಿ ಆಪ್ ಪರ ಅಲೆ ಗುಪ್ತಗಾಮಿನಿಯಾಗಿದೆ. ಅದು ಚುನಾವಣೆ ವೇಳೆ ಅಪ್ಪಳಿಸಲಿದೆ ಎಂದರು.
ಜನವರಿ ಎರಡನೆ ವಾರದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಬಳಿಕ ಎಲ್ಲ 224 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿರ್ಧರಿಸಲಾಗುವುದು. ಅಪರಾಧ ಹಿನ್ನೆಲೆ ಉಳ್ಳವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದರು.
ಹತ್ತು ವರ್ಷದಲ್ಲಿ ಸಣ್ಣ ಪಕ್ಷ ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಹೋರಾಡುತ್ತ ಬೆಳೆದಿದೆ. ದೇಶದಲ್ಲಿ ಪರ್ಯಾಯ ವ್ಯವಸ್ಥೆಗೆ ಜನರು ಕಾತರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದರು.
9 ರಾಷ್ಟ್ರೀಯ ಪಕ್ಷಗಳ ಪೈಕಿ ಆಪ್ ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಜನರು ಉತ್ತಮ ಆಡಳಿತ, ಭ್ರಷ್ಟಾಚಾರ ರಹಿತ ವ್ಯವಸ್ಥೆ ನಿರೀಕ್ಷಿಸುತ್ತಿರುವ ಪರಿಣಾಮ ಆಪ್ ಜನಪ್ರೀಯತೆ ಹೆಚ್ಚಿದೆ ಎಂದರು.
ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆದಿದ್ದೇನೆ. ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದರು.
ಆಪ್ ಜಿಲ್ಲಾ ಘಟಕದ ಅಧ್ಯಕ್ಷ ಬಾಲಕೃಷ್ಞ ನಾಯ್ಕ, ಉಪಾಧ್ಯಕ್ಷ ವೀರಭದ್ರ ನಾಯ್ಕ, ಪ್ರಮುಖರಾದ ಹಿತೇಂದ್ರ ನಾಯ್ಕ, ಕಬೀರ್, ರಾಘವೇಂದ್ರ ನಾಯ್ಕ, ಲಕ್ಷ್ಮಣ ನಾಯ್ಕ, ಇತರರು ಇದ್ದರು.