ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರದ ರಾಮಪಥದ ಕಳಪೆ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲೋಕೋಪಯೋಗಿ ಇಲಾಖೆಯ ಆರು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದಾಗಿ ವರದಿ ತಿಳಿಸಿದೆ.
ಅಯೋಧ್ಯೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಾಮಪಥದ ಸುತ್ತಮುತ್ತಲಿನ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದಿರುವ ಬಗ್ಗೆ ವರದಿಯಾಗಿತ್ತು.
87 ಕೋಟಿ ರೂಪಾಯಿ ವೆಚ್ಚದ ರಾಮಪಥದ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಅಂಜು ದೇಸ್ವಾಲ್, ಕಾರ್ಯನಿರ್ವಾಹಕ ಇಂಜಿನಿಯರ್ ಧ್ರುವ್ ಅಗರ್ವಾಲ್, ಜೂನಿಯರ್ ಇಂಜಿನಿಯರ್ ಪ್ರಭಾತ್ ಪಾಂಡೆ, ಎಕ್ಸಿಕ್ಯೂಟಿವ್ ಇಂಜಿನಿಯರ್ ಆನಂದ್ ಕುಮಾರ್ ದುಬೆ, ಸಹಾಯಕ ಇಂಜಿನಿಯರ್ ರಾಜೇಂದ್ರ ಕುಮಾರ್ ಯಾದವ್ ಹಾಗೂ ಕಿರಿಯ ಇಂಜಿನಿಯರ್ ಮೊಹಮ್ಮದ್ ಶಾಹೀದ್ ಸೇರಿದಂತೆ ಆರು ಮಂದಿಯನ್ನು ಅಮಾನತುಗೊಳಿಸಲಾಗಿದೆ.
ವರದಿಯ ಪ್ರಕಾರ ನೂತನವಾಗಿ ನಿರ್ಮಿಸಿದ್ದ ರಾಮಪಥದ ರಸ್ತೆಯ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದೊಡ್ಡ ಗುಂಡಿ ಬಿದ್ದಿರುವುದು ಟೀಕೆಗೆ ಕಾರಣವಾಗಿದೆ. ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೂತನ ರಾಮಮಂದಿರವನ್ನು ಉದ್ಘಾಟಿಸಿದ್ದರು.