ಕೆ.ಆರ್.ಪೇಟೆ ವರದಿ: ಐ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ೧೮ವರ್ಷಗಳ ಬಳಿಕ ಚಾಂಪಿಯನ್ ಆದ ಆರ್.ಸಿ.ಬಿ ತಂಡದ ಆಟಗಾರರನ್ನು ನೋಡಲು ಹಾಗೂ ವಿಜಯೋತ್ಸವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಹೋಗಿದ್ದ ಕೆ.ಆರ್.ಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದ ಯುವಕನೊಬ್ಬ ಕಾಲ್ತುಳಿತಕ್ಕೆ ಸಿಲುಕಿ ಮೃತ ಪಟ್ಟಿರುವ ಬಗ್ಗೆ ವರದಿಯಾಗಿದೆ.
ರಾಯಸಮುದ್ರ ಗ್ರಾಮದ ಶಿಕ್ಷಕ ಆರ್.ಬಿ.ಚಂದ್ರ ಮತ್ತು ಕಾಂತಾಮಣಿ ದಂಪತಿಗಳ ಪುತ್ರ ಪೂರ್ಣಚಂದ್ರ(೨೫) ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ ಯುವಕ ಎಂದು ತಿಳಿದು ಬಂದಿದೆ.
ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದದಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಅಸಂಖ್ಯಾತ ಅಭಿಮಾನಿಗಳು ಸಾಗರೋಪಾದಿಯಲ್ಲಿ ಭಾಗವಹಿಸಿದ್ದರು. ಇದೇ ವಿಜಯೋತ್ಸವ ಕಾರ್ಯಕ್ರಮ ನೋಡಲು ಪೂರ್ಣಚಂದ್ರ ಸಹ ಹೋಗಿದ್ದನು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಪೂರ್ಣಚಂದ್ರ ಕಾಲ್ತುಳಿತಕ್ಕೆ ಸಿಲುಕಿ ಧಾರುಣವಾಗಿ ಸಾವನ್ನಪ್ಪಿರುತ್ತಾನೆ. ಆರ್.ಸಿ.ಬಿ.ಗೆಲುವಿನ ಸಂಭ್ರಮಕ್ಕೆ ಮುನ್ನವೇ ಮುಗ್ಧ ಜೀವ ನಷ್ಟವಾಗಿರುವುದು ಅತೀವ ದುಃಖ ತಂದಿದೆ ಎಂದು ಶಾಸಕ ಹೆಚ್.ಟಿ.ಮಂಜು ತಮ್ಮ ಸಂತಾಪ ಸೂಚಿಸಿದ್ದಾರೆ.















