ಬೆಂಗಳೂರು(Bengaluru): ನ. 1 ರಂದು ನಟ ದಿ. ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತೇವೆ. ಎಲ್ಲರ ಮನದಾಳದಲ್ಲಿ ಚಿರಸ್ಥಾಯಿಯಾಗಿ ನಟ ಪುನೀತ್ ಅವರು ಉಳಿಯಬೇಕು. ಅವರು ನಿಜವಾಗಿಯೂ ಕರ್ನಾಟಕ ರತ್ನ. ಯುವಜನತೆಗೆ ಸದಾ ಪ್ರೇರಣೆ ನೀಡುತ್ತಿದ್ದರು. ಪುನೀತ್ ಹೆಸರು ಚಿರಸ್ಥಾಯಿಯಾಗಬೇಕು, ಪ್ರೇರಣೆಯಾಗಬೇಕು ಎಂದು ಈ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿಗಳು, ಮುಖ್ಯ ಅತಿಥಿಗಳು, ನಟರು, ಸಚಿವರು, ಶಾಸಕರು, ಹಿರಿಯ ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಅರ್ಥಪೂರ್ಣ ಕಾರ್ಯಕ್ರಮ ಮಾಡಲಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಸಚಿವರಾದ ವಿ. ಸೋಮಣ್ಣ, ಆರ್. ಅಶೋಕ್, ಡಾ. ಸುಧಾಕರ್, ಗೋಪಾಲಯ್ಯ, ಸುನಿಲ್ ಕುಮಾರ್, ಬೈರತಿ ಬಸವರಾಜ್, ರಾಜ್ ಕುಟುಂಬದವರಾದ ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜ್ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.