ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ಆದ ಅನಾಹುತ ಎಂದಿಗೂ ಮರೆಯುವಂತದ್ದಲ್ಲ. ಇದರ ನಂತರ ಕ್ರೀಡಾಂಗಣದ ಬಗ್ಗೆ ಒಂದೆಲ್ಲಾ ಒಂದು ವಿಚಾರಗಳು ಹೊರಗೆ ಬರುತ್ತಿದೆ. ಇದೀಗ ಕ್ರೀಡಾಂಗಣಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಬೆಸ್ಕಾಂ ವಿರುದ್ಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ರೂಲ್ಸ್ ಫಾಲೋ ಮಾಡಿದ್ರೂ ವಿದ್ಯುತ್ ಕಡಿತ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸರಿಯಾದ ಅಗ್ನಿ ಸುರಕ್ಷತಾ ಎನ್ಒಸಿ ಇಲ್ಲ ಎನ್ನುವ ಕಾರಣಕ್ಕೆ ಜೂ.16 ರಂದು ಬೆಸ್ಕಾಂ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿತ್ತು. ಇದನ್ನ ಪ್ರಶ್ನಿಸಿ ಕೆಎಸ್‌ಸಿಎ ಅರ್ಜಿ ಸಲ್ಲಿಸಿದೆ. ಇನ್ನು ಅರ್ಜಿಯಲ್ಲಿ ಅಗ್ನಿ ಮತ್ತು ತುರ್ತು ಸೇವೆಗಳ ಬಗ್ಗೆ ಡಿಜಿಪಿಯವರು ನೀಡಿದ್ದ ನಿರ್ದೇಶನಗಳ ಪಾಲನೆ ಮಾಡಲಾಗಿತ್ತು, ಆದರೂ ಸಹ ಕೆಎಸ್‌ಸಿಎ ನೀಡಿದ ಉತ್ತರ ಪರಿಗಣಿಸದೆ ವಿದ್ಯುತ್ ಕಡಿತ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಬೆಸ್ಕಾಂಗೆ ಚಾಟಿ ಬೀಸಿದ ಹೈಕೋರ್ಟ್: ಇನ್ನು ಕೆಎಸ್‌ಸಿಎ ಸಲ್ಲಿಸಿರುವ ಅರ್ಜಿಯನ್ನ ವಿಚಾರಣೆ ಮಾಡಿದ ಹೈಕೋರ್ಟ್, ಎನ್ಒಸಿ ಇಲ್ಲದಿದ್ದರೂ ಇಷ್ಟು ದಿನಗಳ ಕಾಲ ವಿದ್ಯುತ್ ಸಂಪರ್ಕ ನೀಡಿದ ಕಾರಣಕ್ಕೆ ಬೆಸ್ಕಾಂ ವಿರುದ್ಧ ಹರಿಹಾಯ್ದಿದೆ. ಈಗಾಗಲೇ ಕ್ರೀಡಾಂಗಣದಲ್ಲಿ ಅನೇಕ ಅನಾಹುತಗಳಾಗಿದೆ. ಮುಂದೆ ಅನಾಹುತವಾದರೆ ಯಾರು ಹೊಣೆಯಾಗುತ್ತಾರೆ? ಪ್ರಭಾವಿ ವ್ಯಕ್ತಿಗಳು ಹೇಳಿದ ತಕ್ಷಣ ಸರಿಯಾದ ಸುರಕ್ಷತಾ ಕ್ರಮ ಇಲ್ಲದ ಕಡೆ ಸಂಪರ್ಕ ನೀಡಬಾರದು ಎಂದು ಹೇಳಿರುವ ಕೋರ್ಟ್ ರಾಜ್ಯ ಸರ್ಕಾರ, ಬೆಸ್ಕಾಂ, ಅಗ್ನಿ ಮತ್ತು ತುರ್ತು ಸೇವೆಗಳ ಡಿಜಿಪಿಗೆ ನೋಟಿಸ್ ನೀಡಿದೆ.














