ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ತಾರಕಕ್ಕೇರಿರುವ ಸಂದರ್ಭದಲ್ಲೇ ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಅಸಲಿಗೆ, ಕಾಂಗ್ರೆಸ್ ಹೈಕಮಾಂಡ್ನಿಂದಲೇ ಇಂಥದ್ದೊಂದು ಸೂಚನೆ ಬಂದಿದ್ದು, ಹೈಕಮಾಂಡ್ ಸೂಚನೆಯಂತೆ ಬ್ರೇಕ್ಫಾಸ್ಟ್ ಮೀಟಿಂಗ್ ಆಯೋಜನೆಗೊಂಡಿದೆ ಎನ್ನುತ್ತಿವೆ ಪಕ್ಷದ ಉನ್ನತ ಮೂಲಗಳು. ಇದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಈಗ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಸಮಸ್ಯೆಯನ್ನ ನೀವಿಬ್ಬರೇ ಕುಳಿತು ಬಗೆಹರಿಸಿಕೊಳ್ಳಿ. ಪರಸ್ಪರ ಭೇಟಿಯಾಗಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬನ್ನಿ. ಕಿತ್ತಾಡಿಕೊಂಡು ಬಂದರೆ ನಾವು ಸಂಧಾನ ಮಾಡಲ್ಲ ಎಂದು ಖುದ್ದು ಹೈಕಮಾಂಡ್ ನಾಯಕರೇ ಸೂಚಿಸಿದ್ದಾರೆ.
ಇಬ್ಬರೂ ಒಟ್ಟಿಗೆ ದೆಹಲಿಗೆ ಬನ್ನಿ ಅಂತ ರಾಹುಲ್ ಗಾಂಧಿ ಅವರು ಕಟ್ಟಾಜ್ಞೆ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ. 29ರಂದು ಬೆಳಗ್ಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆಯಲಾಗಿದೆ ಎಂದು ಖುದ್ದು ಸಿದ್ದರಾಮಯ್ಯನವರೇ ಹೇಳಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇಂದು ಸಿಎಂ-ಡಿಸಿಎಂ ದೆಹಲಿಯಲ್ಲಿ ಹೈಕಮಾಂಡ್ ಮೀಟಿಂಗ್ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದ್ರೆ ಇಬ್ಬರೂ ಒಂದು ಕಡೆ ಹೈಕಮಾಂಡ್ ಬರಲು ಹೇಳಿಲ್ಲ ಅಂದ್ರೆ ಮತ್ತೊಂದು ಮೂಲಗಳು ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿವೆ. ಈ ಬೆಳವಣಿಗೆ ನಡುವೆ ಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಏರ್ಪಾಡಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಹಿನ್ನೆಲೆ ಸಿಎಂ ಕಾವೇರಿ ನಿವಾಸದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ 3 ಕೆಎಸ್ಆರ್ಪಿ ತುಕಡಿ, 2 ಬಸ್ ನಿಯೋಜನೆ ಮಾಡಲಾಗಿದೆ.
ಒಟ್ಟಿನಲ್ಲಿ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆ ಕಿತ್ತಾಟಕ್ಕೆ ಇಂದು ಬಹುತೇಕ ತೆರೆ ಬೀಳುವ ಸಾಧ್ಯತೆಯಿದೆ. ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಸಿಎಂ-ಡಿಸಿಎಂ ಇಬ್ಬರೇ ಕುಳಿತು ಚರ್ಚಿಸಲಿದ್ದಾರೆ. ಬಳಿಕ ನಾಳೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.














