ಮೈಸೂರು(Mysuru): ಬಹುಮತಾಧಿಕಾರವೇ ಸರ್ವಾಧಿಕಾರವಲ್ಲ. ಅಧಿಕಾರ ಅಹಂಕಾರವಾಗದೇ ಅಂತಃಕರಣ ಆಗಬೇಕು. ಅದು ಮಾತ್ರ ಮನುಷ್ಯನ ಬಗ್ಗೆ ಯೋಚಿಸುತ್ತದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದರು.
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದಿಂದ ಮಾನಸ ಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಎರಡು ದಿನಗಳವರೆಗೆ ಆಯೋಜಿಸಿರುವ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ನಡಿಗೆ… ಪ್ರಬುದ್ಧ ಭಾರತದ ಕಡೆಗೆ’ ಕುರಿತ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಹುಮತಾಧಿಕಾರವೇ ಸರ್ವಾಧಿಕಾರ, ಸರ್ಕಾರ ನಮ್ಮದಿರುವುದರಿಂದ ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದ್ದಾರೆ. ಅದು ಸರಿಯಲ್ಲ. ಟೀಕಿಸುವವರೂ ನಮ್ಮೆದುರಿರಬೇಕು ಎಂದು ಬಯಸುವ ತಿಳಿವಳಿಕೆಯೂ ಬಂದಿಲ್ಲ ಎಂದು ವಿಶ್ಲೇಷಿಸಿದರು.
ಸದ್ಯ ಆರ್ಥಿಕ ಭ್ರಷ್ಟತೆಯ ಜೊತೆಗೆ ಭಾಷಿಕ ಭ್ರಷ್ಟತೆಯೂ ವಿಜೃಂಭಿಸುತ್ತಿದೆ. ಇದರರ್ಥವು ಪ್ರಜಾಪ್ರಭುತ್ವದ ಪರಿಭಾಷೆಯನ್ನೂ ಉಳಿಸಿಕೊಂಡಿಲ್ಲ ಎಂಬುದೇ ಆಗಿದೆ ಎಂದು ಟೀಕಿಸಿದರು.
ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಸೇರಿದಾಗ ಬರುವುದೇ ನಿಜ ಅರ್ಥದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ. ಈಗ ಏನಾಗುತ್ತಿದೆ? ದೇಶದ ಸಮಸ್ಯೆಗಳನ್ನು ಗೌಣಗೊಳಿಸಿ ಮೂಲಭೂತವಾದ ಮುನ್ನೆಲೆಗೆ ಬರುತ್ತಿದೆ. ನಿಜವಾಗಿಯೂ ಅನೇಕ ಸಮಸ್ಯೆಗಳಿದ್ದರೂ, ಅವೆಲ್ಲವನ್ನೂ ಮೈಮರೆಸುವಷ್ಟರ ಮಟ್ಟಿಗೆ ಮೂಲಭೂತವಾದವನ್ನು ಮುಂದೆ ತರಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಾವೆಲ್ಲರೂ ರಾಷ್ಟ್ರೀಯವಾದಿಗಳೆ. ಅದು ಯಾರೋ ಒಬ್ಬರು ಅಥವಾ ಒಂದು ಧರ್ಮಕ್ಕೆ ಸೇರಿದ್ದಲ್ಲ. ದೇಶದ ಉನ್ನತಿ, ಸಮಾನತೆ, ಸ್ವಾತಂತ್ರ್ಯ, ಸಹಿಷ್ಣುತೆ ಬಗೆಗೆ ಬದ್ಧತೆ ಉಳ್ಳವರೆಲ್ಲರೂ ರಾಷ್ಟ್ರೀಯವಾದಿಗಳೇ. ಅದೇ ನಿಜವಾದ ರಾಷ್ಟ್ರೀಯತೆ. ಮತೀಯತೆಗೂ–ರಾಷ್ಟ್ರೀಯತೆಗೂ ಅಂತರ ನಿರ್ಮಿಸಬೇಕು. ನಿಜವಾದ ರಾಷ್ಟ್ರೀಯತೆಯು ಮತೀಯತೆ ಅಥವಾ ಮೂಲಭೂತವಾದ ಆಗುವುದಿಲ್ಲ. ಆದರೆ, ಪ್ರಸ್ತುತ ಮೂಲಭೂತವಾದ ಮುನ್ನೆಲೆಗೆ ತಂದು ಮೂಲಭೂತ ಸಮಸ್ಯೆಗಳನ್ನು ಹಿನ್ನೆಲೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಇದು ದೊಡ್ಡ ಸಮಸ್ಯೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ಸ್ಥಿತಿ ಹೇಗಿದೆ ಎಂದರೆ, ಕುರ್ಚಿಯಲ್ಲಿ ಕುಳಿತ ಮನುಷ್ಯ ಕುಬ್ಜನಾಗಿದ್ದಾನೆ. ಅದು ಪ್ರಜಾಪ್ರಭುತ್ವ ಅಲ್ಲ. ಕುರ್ಚಿಯಲ್ಲಿ ಕುಳಿತವರು ಎತ್ತರವಾಗಿದ್ದರೆ ಅಲ್ಲಿ ಪ್ರಜಾಪ್ರಭುತ್ವ ಇರುತ್ತದೆ’ ಎಂದು ವ್ಯಾಖ್ಯಾನಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರಕುಮಾರ್ ಹಾಗೂ ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ್ ಇದ್ದರು.