ಬೆಂಗಳೂರು (Bengaluru): ನೆಚ್ಚಿನ ನಟ, ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ಕುಮಾರ್ ಅವರನ್ನು ಮತ್ತೆ ಪರದೆಯ ಮೇಲೆ ನೋಡಲು ಕಾಯುತ್ತಿದ್ದ ಅಪ್ಪು ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಅಭಿಮಾನಿಗಳು ಶೀಘ್ರದಲ್ಲೇ ಪುನೀತ್ ರಾಜ್ ಕುಮಾರ್ ಅವರನ್ನು ತೆರೆ ಮೇಲೆ ನೋಡಬಹುದು.
ಪವರ್ಸ್ಟಾರ್ ಅಭಿನಯಿಸಿದ ಕೊನೆಯ ಸಿನಿಮಾ ‘ಲಕ್ಕಿಮ್ಯಾನ್’ ಆಗಸ್ಟ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದೆ.
ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿದ್ದು, ಪುನೀತ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇಲ್ಲಿ ದೇವರ ಪಾತ್ರದಲ್ಲಿ ಪುನೀತ್ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ಬಹುಭಾಷಾ ನಟ ಪ್ರಭುದೇವ ಕೂಡ ನಟಿಸಿದ್ದು, ಹಾಡೊಂದರಲ್ಲಿ ಇವರಿಬ್ಬರೂ ಸಖತ್ ಸ್ಟೆಪ್ ಹಾಕಿದ್ದಾರೆ. ಜಾನಿ ಮಾಸ್ಟರ್ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡನ್ನು ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಇದೇ ಮೊದಲಬಾರಿಗೆ, ತಮ್ಮ ಡ್ಯಾನ್ಸಿಂಗ್ನಿಂದಲೇ ಗುರುತಿಸಿಕೊಂಡಿರುವ ಪುನೀತ್ ರಾಜಕುಮಾರ್ ಹಾಗೂ ಪ್ರಭುದೇವ ಅವರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಲ್ಲದೆ, ಅದ್ಭುತವಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.
ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ಹಾಗೂ ರೋಷನಿ ಪ್ರಕಾಶ್ ಬಣ್ಣಹಚ್ಚಿದ್ದಾರೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲಾ ಚಿತ್ರತಂಡ ಪೂರ್ಣಗೊಳಿಸಿದೆ. ತಮಿಳಿನ ‘ಓ ಮೈ ಕಡವುಳೆ’ ಸಿನಿಮಾ ಕಥೆಯ ಎಳೆಯನ್ನಿಟ್ಟುಕೊಂಡು, ಪ್ರಭುದೇವ ಸಹೋದರ ಎಸ್.ನಾಗೇಂದ್ರ ಪ್ರಸಾದ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರವನ್ನು ಪಿ.ಆರ್. ಮೀನಾಕ್ಷಿ ಸುಂದರಂ ಹಾಗೂ ಪಿ.ಕಾಮರಾಜ್ ನಿರ್ಮಾಣ ಮಾಡಿದ್ದು, ಇದು ಕನ್ನಡದಲ್ಲಿ ಅವರ ಮೊದಲ ಚಿತ್ರ.














