ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆ ನಡೆದಿದೆ. ಪ್ರಜ್ವಲ್ ರೇವಣ್ಣನ ಮಾಜಿ ಚಾಲಕ ಕಾರ್ತಿಕ್ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿದ್ದು, ಪ್ರಜ್ವಲ್ ಮೊಬೈಲಿನಲ್ಲಿ 2000ಕ್ಕೂ ಹೆಚ್ಚು ಮಹಿಳೆಯರ ಚಿತ್ರಗಳು ಹಾಗೂ 30-40 ಅಶ್ಲೀಲ ವಿಡಿಯೋಗಳು ಇದ್ದವು ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಕಾರ್ತಿಕ್ ಅವರು ತಮ್ಮ ಹೇಳಿಕೆಯಲ್ಲಿ, 2009ರಿಂದ ಹೆಚ್.ಡಿ. ರೇವಣ್ಣ ಕುಟುಂಬದೊಂದಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದೆ. 2018ರಿಂದ ಪ್ರಜ್ವಲ್ ರೇವಣ್ಣ ಕಾರು ಚಾಲಕರಾಗಿ ಕ್ಷೇತ್ರದಲ್ಲೂ ಸಂಚರಿಸುತ್ತಿದ್ದೆ ಎಂದು ವಿವರಿಸಿದ್ದಾರೆ. ಪ್ರಜ್ವಲ್ ಮೊಬೈಲಿನಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸುತ್ತಿರುವುದನ್ನು ಹಲವು ಬಾರಿ ಗಮನಿಸಿದ್ದೆ. ಜಯನಗರದ ಗೆಳತಿಯ ಮನೆಗೆ ಹೋದಾಗ ಕಾರಿನಲ್ಲಿ ಮೊಬೈಲ್ ಬಿಟ್ಟಿದ್ದರು. ಪಾಸ್‌ವರ್ಡ್ ತಿಳಿದಿದ್ದ ಕಾರಣ ಕುತೂಹಲದಿಂದ ಮೊಬೈಲ್ ಪರಿಶೀಲಿಸಿದಾಗ, ಸುಮಾರು 2000 ಚಿತ್ರಗಳು ಮತ್ತು 30-40 ಮಹಿಳೆಯರ ಅಶ್ಲೀಲ ವಿಡಿಯೋಗಳು ಪ್ರಜ್ವಲ್ ಫೋನ್‌ನಲ್ಲಿ ಇದ್ದವು. ಈ ಚಿತ್ರಗಳು ಮತ್ತು ವಿಡಿಯೋಗಳಲ್ಲಿ ಕೆಲವು ಪಕ್ಷದ ಕಾರ್ಯಕರ್ತೆಯರು, ಮಹಿಳಾ ಸಿಬ್ಬಂದಿ ಇದ್ದಾರೆ ಎಂದು ಕಾರ್ತಿಕ್ ಹೇಳಿದ್ದಾರೆ.
ಮಗನಿಗೆ ಬುದ್ದಿ ಹೇಳಲಿ ಎಂದು ಭವಾನಿ ರೇವಣ್ಣರಿಗೆ ಮಾಹಿತಿ ನೀಡಿದ್ದೆ. ಆ ವಿಡಿಯೋಗಳನ್ನು ಭವಾನಿ ರೇವಣ್ಣರಿಗೆ ತೋರಿಸಲೆಂದು ವರ್ಗಾಯಿಸಿಕೊಂಡೆ. ಅವರು ಫೋಟೋ, ವಿಡಿಯೋ ತಮಗೆ ಕಳುಹಿಸಲು ಕೋರಿದ್ದರು. ಬೇರೆಲ್ಲೂ ಈ ವಿಷಯ ಬಹಿರಂಗಪಡಿಸದಂತೆ ಮನವಿ ಮಾಡಿದ್ದರು. ಇದಾದ ಬಳಿಕ ಭವಾನಿ ರೇವಣ್ಣ ಪ್ರಜ್ವಲ್ ಜೊತೆ ಮಾತು ಬಿಟ್ಟಿದ್ದರು.
ಹುಟ್ಟುಹಬ್ಬಕ್ಕೆ ಭವಾನಿ ರೇವಣ್ಣ ಅವರು ಶುಭ ಕೋರಿದಾಗ ಪ್ರಜ್ವಲ್ ಪ್ರತಿಕ್ರಿಯೆ ನೀಡಿರಲಿಲ್ಲ. ವಿಡಿಯೋ ಬಗ್ಗೆ ತಿಳಿಸಿದ್ದು ಯಾರೆಂದು ಕೇಳಿದಾಗ ಭವಾನಿ ಅವರು ನನ್ನ ಹೆಸರು ಹೇಳಿದ್ದರು. ಆಗ ಫೋನ್ ಮಾಡಿ ಪ್ರಜ್ವಲ್ ತನಗೆ ಜೋರು ಮಾಡಿದ್ದರು. ನಮ್ಮ ನಡುವೆ ಜಗಳವಾಗಿ 2022ರಲ್ಲಿ ನಾನು ಕೆಲಸ ಬಿಟ್ಟಿದ್ದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೇಸ್ ಕೂಡಾ ಹಾಕಿದ್ದೆ. ನಂತರ ಆಸ್ತಿ ವಿವಾದ ಬಗೆಹರಿಸುತ್ತೇನೆ ಕೆಲಸಕ್ಕೆ ಬರುವಂತೆ ಕರೆದಿದ್ದರು. ಆದರೆ ವಿಡಿಯೋ ಬಹಿರಂಗಪಡಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು.
ನನ್ನನ್ನು ಪ್ರತಿವಾದಿಯಾಗಿ ಮಾಡಿದ್ದರಿಂದ ನಾನು ವಕೀಲ ದೇವರಾಜೇಗೌಡರನ್ನು ಸಂಪರ್ಕ ಮಾಡಿದ್ದೆ. ಸಾಕ್ಷಿಗಾಗಿ ಫೋಟೋಗಳನ್ನು ವಿಡಿಯೋಗಳನ್ನು ನೀಡುವಂತೆ ಸೂಚಿಸಿದ್ದರಿಂದ ಪೆನ್ ಡ್ರೈವ್‌ನಲ್ಲಿ ನೀಡಿದ್ದೆ. ಆದರೆ ಚುನಾವಣೆ ವೇಳೆ ಈ ಫೋಟೋ, ವಿಡಿಯೋಗಳು ಬಹಿರಂಗಗೊಂಡವು ಎಂದು ಮಾಜಿ ಚಾಲಕ ಕಾರ್ತಿಕ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅಶ್ಲೀಲ ದೃಶ್ಯಾವಳಿಗಳು ಸಿಕ್ಕಿದ್ದು ಹೇಗೆ ಎಂಬುದನ್ನು ವಿವಿರಿಸಿದ್ದಾರೆ.














