ಬೆಂಗಳೂರು: ಅತ್ಯಾಚಾರ ಮತ್ತು ಸಾಮೂಹಿಕ ಲೈಂಗಿಕ ಶೋಷಣೆಯಂತಹ ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿ ಜೈಲಿನಲ್ಲಿ ಇರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಮತ್ತೆ ನಿರಾಸೆಯ ಸುದ್ದಿ ನೀಡಿದೆ. ಜಾಮೀನು ಕೋರಿ ಸಲ್ಲಿಸಿದ್ದ ಅವರ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ಜೂನ್ 24ಕ್ಕೆ ಮುಂದೂಡಲಾಗಿದೆ.
ಈ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ಪೀಠ ಪರಿಶೀಲನೆಗೆ ತೆಗೆದುಕೊಂಡಿದ್ದು, ಯಾವುದೇ ತೀರ್ಮಾನ ಕೈಗೊಳ್ಳದೆ ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದೆ. ಪ್ರಜ್ವಲ್ ರೇವಣ್ಣ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.
ಪ್ರಜ್ವಲ್ ರೇವಣ್ಣ ವಿರುದ್ಧ ಕೆಲ ಮಹಿಳೆಯರು ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ಆರೋಪ ಹಾಕಿದ್ದು, ಈ ಕುರಿತು ಆಳವಾದ ತನಿಖೆ ನಡೆಯುತ್ತಿದೆ. ಪ್ರಕರಣದ ಗಂಭೀರತೆ ಹಾಗೂ ಸಾರ್ವಜನಿಕ ಭದ್ರತೆಗೆ ಸಂಬಂಧಿಸಿದ ಕಾರಣಗಳಿಂದಾಗಿ ಹೈಕೋರ್ಟ್ ತಾತ್ಕಾಲಿಕವಾಗಿ ಜಾಮೀನಿಗೆ ಅವಕಾಶ ನೀಡದೆ ವಿಚಾರಣೆಯನ್ನು ಮುಂದೂಡಿದೆ.
ಇದರಿಂದಾಗಿ, ಪ್ರಜ್ವಲ್ ರೇವಣ್ಣಗೆ ಕಾನೂನು ಹೋರಾಟದಲ್ಲಿ ಮತ್ತೊಂದು ಅಡೆತಡೆಯಾಗಿದೆ. ಮುಂದೆ ವಿಚಾರಣೆಯಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯುತ್ತವೆ ಎಂಬುದನ್ನು ಕಾಯಬೇಕಾಗಿದೆ.














