ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧನವಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿ ಎಸ್ಐಟಿ 120 ಸಾಕ್ಷಿಗಳ 1691 ಪುಟಗಳ ಚಾರ್ಜ್ಶೀಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಎಸ್ಐಟಿ ಚಾರ್ಜ್ಶೀಟ್ನಲ್ಲಿ ಪ್ರಜ್ವಲ್ ರೇವಣ್ಣ ಕಾಮಕಾಂಡ ಬಯಲಾಗಿದೆ.
ಪತಿಯನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಸಿ ಜೆಡಿಎಸ್ ಪಕ್ಷದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದು ಎಸ್ಐಟಿ ತನಿಖೆಯಲ್ಲಿ ಸಾಬೀತಾಗಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಸರ್ಕಾರ ಹಂಚಿಕೆ ಮಾಡಿದ್ದ ಹಾಸನದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅತಿಥಿ ಗೃಹದಲ್ಲಿ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ.
ಪ್ರಜ್ವಲ್ ರೇವಣ್ಣ ತನ್ನ ಕಾಮತೃಷೆ ತೀರಿಸಿಕೊಳ್ಳಲು ಸಂತ್ರಸ್ತೆ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿದ್ದಲ್ಲದೇ ಮಹಿಳೆಗೆ ವಿಡಿಯೋ ಕರೆ ಕೂಡ ಮಾಡುತ್ತಿದ್ದರು. ಈ ವೇಳೆ ಸಂತ್ರಸ್ತೆಗೆ ತಿಳಿಯದಂತೆ ನಗ್ನ ಫೋಟೋಗಳ ಸ್ಕ್ರೀನ್ ಶಾಟ್ಗಳನ್ನು ತೆಗೆಯುತ್ತಿದ್ದರು. ಇನ್ನು ಅತ್ಯಚಾರದ ವೇಳೆ ಅಳಬಾರದು ನಗಬೇಕು ಎಂದು ಹೇಳಿ ವಿಕೃತವಾಗಿ ವರ್ತಿಸಿದ್ದರು. ನಗ್ನ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬೆದರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದರು. ಹೊಳೆನರಸೀಪುರದ ಮನೆಗೂ ಕರೆಸಿ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿರೋದು ದೃಢವಾಗಿದೆ. ತಾನು ಹೇಳಿದ ಬಟ್ಟೆ, ಒಳಉಡುಪು ಧರಿಸಬೇಕು ಎಂದು ಸಂತ್ರಸ್ತೆಗೆ ಪ್ರಜ್ವಲ್ ರೇವಣ್ಣ ಹೇಳುತ್ತಿದ್ದರು. 2020ರಿಂದ 2023ರವರೆಗೂ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ.
ಹೊಳೆನರಸೀಪುರದಲ್ಲಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಚೆನ್ನಾಂಬಿಕ ಹೆಸರಿನ ನಿವಾಸಕ್ಕೆ ಪ್ರಜ್ವಲ್ ರೇವಣ್ಣ 2020ರ ಒಂದು ಮಧ್ಯಾಹ್ನ 12.30ರ ಸಮಯದಲ್ಲಿ ಸಂತ್ರಸ್ತೆಯನ್ನು ಕರೆಸಿಕೊಂಡಿದ್ದರು. ಮನೆಯ ಮೂರನೇ ಮಹಡಿಯ ಕೋಣೆಯಲ್ಲಿ ಅತ್ಯಾಚಾರ ಎಸಗಿದ್ದಾರೆ. ಈ ಕೃತ್ಯವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು, ಈ ವಿಷಯವನ್ನು ಹೊರಗೆ ಹೇಳಿದರೆ ವಿಡಿಯೊಗಳನ್ನು ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಸ್ಐಟಿ ಉಲ್ಲೇಖಿಸಿದೆ.
ಪ್ರಜ್ವಲ್ ರೇವಣ್ಣ ಕೃತ್ಯಕ್ಕೆ ಸಾಕ್ಷಿ ಓರ್ವ ಶಾಸಕ
2022ರಲ್ಲಿ ಬೇಲೂರಿನ ಕಾರ್ಯಕ್ರಮಯೊಂದರಲ್ಲಿ ಸಂತ್ರಸ್ತೆ, ಪ್ರಜ್ವಲ್ ರೇವಣ್ಣ ಮತ್ತು ಬೇಲೂರು ಶಾಸಕ ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಪ್ರಜ್ವಲ್ ರೇವಣ್ಣ ಸಂತ್ರಸ್ತೆಗೆ ಕರೆ ಮಾಡಿ ಅತಿಥಿ ಗೃಹಕ್ಕೆ ಬರಲು ಒತ್ತಡ ಹೇರಿದ್ದಾರೆ. ಅತಿಥಿ ಗೃಹಕ್ಕೆ ಹೋಗಿದ್ದ ಸಂತ್ರಸ್ಥೆಯ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ಬೇಲೂರು ಶಾಸಕ ಎಸ್ಐಟಿ ಮುಂದೆ ಹೇಳಿದ್ದಾರೆ.