ನವದೆಹಲಿ : ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಸ್ವಲ್ಪವೂ ಸಹನೆ ತೋರಬೇಕಾದ ಅಗತ್ಯ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಪ್ರಜ್ವಲ್ ಅವರಿಗೆ ದೇಶದಿಂದ ಹೊರಗಡೆ ಹೋಗಲು ಕರ್ನಾಟಕದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅನುವು ಮಾಡಿಕೊಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿರುವ ಕಾರಣ, ಕ್ರಮ ಜರುಗಿಸುವ ಹೊಣೆಯು ರಾಜ್ಯ ಸರ್ಕಾರದ ಮೇಲೆ ಇದೆ ಎಂದು ಅವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಸಹಸ್ರಾರು ವಿಡಿಯೊಗಳು ಇವೆ ಎಂದಾದರೆ, ಅವು ಜೆಡಿಎಸ್ ಪಕ್ಷವು ಕಾಂಗ್ರೆಸ್ಸಿನ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಅವಧಿಗೆ ಸೇರಿವೆ ಎಂಬುದು ಗೊತ್ತಾಗುತ್ತದೆ. ಅವರು ಅಧಿಕಾರದಲ್ಲಿ ಇದ್ದಾಗ ಈ ವಿಡಿಯೊಗಳನ್ನು ಒಟ್ಟುಗೂಡಿಸಿಕೊಂಡಿದ್ದರು, ಒಕ್ಕಲಿಗರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ನಂತರದಲ್ಲಿ, ಚುನಾವಣೆಯ ಸಂದರ್ಭದಲ್ಲಿ ಈ ವಿಡಿಯೊಗಳನ್ನು ಬಿಡುಗಡೆ ಮಾಡಿದರು ಎಂದು ಮೋದಿ ಅವರು ಹೇಳಿದ್ದಾರೆ.
ಪ್ರಜ್ವಲ್ ಅವರನ್ನು ದೇಶದಿಂದ ಹೊರಗೆ ಕಳುಹಿಸಿದ ನಂತರ ವಿಡಿಯೊಗಳನ್ನು ಬಿಡುಗಡೆ ಮಾಡಲಾಯಿತು ಎಂದಿರುವ ಮೋದಿ ಅವರು, ಈ ಬೆಳವಣಿಗೆಗಳು ಬಹಳ ಅನುಮಾನಾಸ್ಪದ ಎಂದಿದ್ದಾರೆ. ರಾಜ್ಯ ಸರ್ಕಾರದ ಬಳಿ ಮಾಹಿತಿ ಇದ್ದಿದ್ದರೆ ಅದು ಒಂದು ಕಣ್ಣಿರಿಸಬೇಕಿತ್ತು, ವಿಮಾನ ನಿಲ್ದಾಣಗಳಲ್ಲಿ ನಿಗಾ ಇರಿಸಬೇಕಿತ್ತು ಎಂದಿದ್ದಾರೆ.
ನೀವು ಏನನ್ನೂ ಮಾಡಲಿಲ್ಲ, ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಿಲ್ಲ. ಇದರ ಅರ್ಥ, ಇವೆಲ್ಲ ಒಂದು ರಾಜಕೀಯ ಆಟವಾಗಿತ್ತು, ಅವರು ಹೊಂದಾಣಿಕೆ ಮಾಡಿಕೊಂಡಿದ್ದ ಅವಧಿಗೆ ಸೇರಿದ ವಿಡಿಯೊಗಳು ಇವು ಎಂಬುದು ಅವರಿಗೆ ಗೊತ್ತಿತ್ತು, ಅವರೇ ವಿಡಿಯೊಗಳನ್ನು ಒಗ್ಗೂಡಿಸಿ ಇಟ್ಟುಕೊಂಡಿದ್ದರು. ಆದರೆ, ಅಪರಾಧಿಗಳನ್ನು ಬಿಡಬಾರದು. ನಮ್ಮ ದೇಶದಲ್ಲಿ ಇಂತಹ ಆಟಗಳನ್ನು ಕೊನೆಗೊಳಿಸಬೇಕು’ ಎಂದು ಅವರು ಹೇಳಿರುವುದಾಗಿ ವಾಹಿನಿ ಬಿಡುಗಡೆ ಮಾಡಿರುವ ಸಂದರ್ಶನದ ಪಠ್ಯದಲ್ಲಿ ಉಲ್ಲೇಖವಾಗಿದೆ.