ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ವಿಶೇಷ ತನಿಖಾ ತಂಡ ಸ್ಥಳ ಮಹಜರು ನಡೆಸಿತು. ಕ್ಯೂಆರ್‌ಟಿ ವಾಹನದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಕರೆದುಕೊಂಡು ಹೊಳೆನರಸೀಪುರಕ್ಕೆ ಬಂದಿದ್ದ ಎಸ್ಐಟಿ ಅಧಿಕಾರಿಗಳು, ಪ್ರಜ್ವಲ್ ನಿವಾಸದಲ್ಲಿ ಮಹಜರು ನಡೆಸಿದರು.
ಸತತ ನಾಲ್ಕು ಗಂಟೆ ಮಹಜರು: ಶನಿವಾರ ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಹಾಸನಕ್ಕೆ ಕರೆತರಲಾಗಿತ್ತು. ಪ್ರಜ್ವಲ್ ನಿವಾಸದಲ್ಲಿ ಎಫ್ಎಸ್ಎಲ್ ತಜ್ಞರ ಸಮ್ಮುಖದಲ್ಲಿ ಸತತ ನಾಲ್ಕು ಗಂಟೆ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಯಿತು. ಮಹಜರು ಪೂರ್ಣವಾದ ಬಳಿಕ ಪ್ರಜ್ವಲ್ ಅವರನ್ನು ಎಸ್ಐಟಿ ಅಧಿಕಾರಿಗಳು ಕರೆದೊಯ್ದರು. ನಾಲ್ಕು ವಾಹನಗಳಲ್ಲಿ ಆಗಮಿಸಿದ್ದ ಎಸ್ಐಟಿ ತಂಡ ಮಹಜನರು ಪೂರ್ಣಗೊಳಿಸಿದೆ. ಇನ್ನು ಮಹಜರು ಮುಗಿಸಿ ತೆರಳುತ್ತಿದ್ದ ವೇಳೆ ಬೆಂಬಲಿಗರು ಪ್ರಜ್ವಲ್ ಪರ ಘೋಷಣೆ ಕೂಗಿದರು.
ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮತ್ತು ಸಿಐಡಿ ಎರಡು ಘಟಕಗಳಲ್ಲಿ ದೂರು ದಾಖಲಾಗಿದೆ. ಪ್ರಜ್ವಲ್ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದು, ಎಸ್ಐಟಿ ತನಿಖೆ ನಡೆಸುತ್ತಿದೆ.
ಮೇ 31 ರಂದು ವಿದೇಶದಿಂದ ಬೆಂಗಳೂರಿಗೆ ಬಂದ ಬಳಿಕ ಪ್ರಜ್ವಲ್ ಅವರನ್ನು ಎಸ್ಐಟಿ ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಿತ್ತು. ಆಗ ಕೋರ್ಟ್, ಜೂನ್ 6ರ ವರೆಗೆ ಎಸ್ಐಟಿ ವಶಕ್ಕೆ ನೀಡಿತ್ತು. ಜೂನ್ 6 ರಂದು ಪ್ರಜ್ವಲ್ ಅವರನ್ನು ಮತ್ತೆ ಕೋರ್ಟ್ಗೆ ಹಾಜರುಪಡಿಸಿ, ಜೂನ್ 10ರ ವರೆಗೆ ಎಸ್ಐಟಿ ವಶಕ್ಕೆ ಪಡೆದಿದೆ.