ಬೆಂಗಳೂರು: ಶ್ರೀಕೃಷ್ಣನ ದಾಖಲೆಯನ್ನು ಕೂಡ ಮುರಿಯಬೇಕು ಎಂದು ಪ್ರಜ್ವಲ್ ಅಂದುಕೊಂಡಿರಬೇಕು. ಆದರೆ, ಇದು ಗಿನ್ನಿಸ್ ದಾಖಲೆಯಾಗಬಹುದೇನೋ ಎಂದು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಸಚಿವ ಆರ್ ಬಿ ತಿಮ್ಮಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಈ ಕುರಿತು ಮಾತನಾಡಿರುವ ಅವರು, ಈ ಪೆನ್ ಡ್ರೈವ್ ಪ್ರಕರಣವನ್ನು ನೋಡಿದರೆ ದೇಶದಲ್ಲಿ ಇದಕ್ಕಿಂತ ಕೆಟ್ಟದ್ದೇನೂ ನಡೆದಿಲ್ಲ ಎಂಬಂತೆ ಭಾಸವಾಗುತ್ತಿದೆ. ಇದು ಗಿನ್ನಿಸ್ ದಾಖಲೆ ಮಾಡಬಹುದು. ಭಗವಾನ್ ಶ್ರೀಕೃಷ್ಣನ ಭಕ್ತಿಭಾವಕ್ಕೆ ಸ್ತ್ರೀಯರು ಪರವಶರಾಗುತ್ತಿದ್ದರು. ಆದರೆ, ಈ ಪ್ರಕರಣದಲ್ಲಿ ಹಾಗಲ್ಲ. ಕೃಷ್ಣನ ದಾಖಲೆಯನ್ನು ಮುರಿಯಲು ಪ್ರಜ್ವಲ್ ಬಯಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವಿಚಾರವಾಗಿ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದ್ದು, ಸದ್ಯ ವಿದೇಶದಲ್ಲಿರುವ ಪ್ರಜ್ವಲ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ.