ದಾವಣಗೆರೆ: ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಳ ವಿವಿಧ ನಿಗಮಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಅರೇಮಲ್ಲಾಪುರದ ಶ್ರೀ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು.
ಸೋಮವಾರ (ಜ.13) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ 23 ವಿವಿಧ ನಿಗಮಗಳ ಪೈಕಿ 5 ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ 250 ಕೋಟಿ ನೀಡಿದೆ. ಇನ್ನುಳಿದ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಮಠ ಮಾನ್ಯಗಳಿಗೆ ನಿಲ್ಲಿಸಿರುವ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಬಜೆಟ್ ಅಧಿವೇಶನದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಕೆಲವಾರು ದೇವಸ್ಥಾನದಲ್ಲಿರುವಂತಹ ವಸ್ತ್ರ ಸಂಹಿತೆಯ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ ನೀಡಿದ್ದಾರೆ. ಅಂಗಿ ತೆಗೆದು ದೇವಸ್ಥಾನದ ಒಳಗೆ ಹೋಗುವ ಅಗತ್ಯ ಇಲ್ಲ ಎಂಬುದನ್ನು ಕ್ರಾಂತಿಕಾರಿ ಗುರು ನಾರಾಯಣ ಗುರುಗಳು ಹೇಳಿದ್ದಾರೆ ಎಂದು ಪಿಣರಾಯಿ ವಿಜಯನ್ ಹೇಳಿರುವುದು ಸರಿ ಅಲ್ಲ. ನಾರಾಯಣ ಗುರುಗಳು ಕ್ರಾಂತಿಕಾರಿ ಅಲ್ಲ. ಅವರು ದೇವರು ಸಮಾನರು. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳಂತೆ ಅವರನ್ನು ಪೂಜಿಸಲಾಗುತ್ತದೆ. ಅವರು ಸನಾತನ ಧರ್ಮ ವಿಶ್ವಾಸಿಗಳೂ ಆಗಿದ್ದವರು. ಆದರೂ, ಕಮ್ಯುನಿಸ್ಟ್ ನವರು ಉದ್ದೇಶಪೂರ್ವಕವಾಗಿ ನಾರಾಯಣ ಗುರುಗಳು ಸನಾತನ ಧರ್ಮದ ವಿಶ್ವಾಸಿಗಳಲ್ಲ ಎಂದೆಲ್ಲ ಅವರ ಹೆಸರು ಬಳಸುತ್ತಿದ್ದಾರೆ. ಧಾರ್ಮಿಕ, ಸಾಮಾಜಿಕ ಆಚಾರ, ವಿಚಾರಗಳ ವಿಷಯ ದಲ್ಲಿ ಸರ್ಕಾರ ಮೂಗು ತೂರಿಸುವ ಅವಶ್ಯಕತೆ ಇಲ್ಲ. ಹಾಗಾದರೆ ನಾವು ಸಹ ಬೇರೆ ಸಮುದಾಯದ ಧಾರ್ಮಿಕ ವಿಚಾರ ಗಳ ಬಗ್ಗೆ ಮಾತನಾಡಬೇಕಾಗುತ್ತದೆ ಎಂದು ತಿಳಿಸಿದರು.