ಮೈಸೂರು: ಕೆ ಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡಲು ಸಹಮತ ವ್ಯಕ್ತಪಡಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯ ಬಿಜೆಪಿ ಒಬಿಸಿ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಪ್ರತಾಪ್ ಸಿಂಹ ಬಕೆಟ್ ಹಿಡಿಯುವುದನ್ನು ಬಿಡಬೇಕು ಎಂದು ಹರಿಹಾಯ್ದಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಘು ಕೌಟಿಲ್ಯ, ಕೆಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಬೇಕು ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿರುವುದು ಬಕೆಟ್ ಹಿಡಿದಂತೆಯೇ. ಪ್ರತಾಪ್ ಸಿಂಹ ಯಾವ ಉದ್ದೇಶಕ್ಕಾಗಿ ಬಕೆಟ್ ಹಿಡಿಯುತ್ತಿದ್ದಾರೋ ಗೊತ್ತಿಲ್ಲ. ಯಾರನ್ನು ಓಲೈಕೆ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಕೆ ಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಪ್ರತಾಪ್ ಸಿಂಹ ಆಗ್ರಹಿಸಿರುವುದು ಬಕೆಟ್ ಹಿಡಿದಂತೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಅವರ ಮೇಲೆ ಈಗ ಕಳಂಕವಿದೆ. ಇಂತಹ ಸಂದರ್ಭದಲ್ಲಿ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ರಸ್ತೆ ಎಂದು ಹೆಸರಿಡಲು ಮುಂದಾಗಿರುವುದು ಸರಿಯಲ್ಲ. ಸದ್ಯಕ್ಕೆ ಮಹಾನಗರ ಪಾಲಿಕೆ ಸದಸ್ಯರು ಇಲ್ಲ. ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ ನಿರ್ಣಯ ಕೈಗೊಳ್ಳದೇ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವರು ಓಲೈಕೆಗಾಗಿ ಸಿದ್ದರಾಮಯ್ಯ ರಸ್ತೆ ಎಂದು ಹೆಸರಿಡಲು ಮುಂದಾಗಿದ್ದಾರೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ತಿಳಿಸಿದರು.
ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ರಸ್ತೆ ಎಂದು ನಾಮಕರಣ ಹಾಸ್ಯಾಸ್ಪದ
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಎಂ. ಜಿ ಮಹೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಮುಡಾ ಹಗರಣದಲ್ಲಿ A1 ಆರೊಪಿಯಾಗಿದ್ದಾರೆ. ಅವರ ಮೇಲೆ ಲೋಕಾಯುಕ್ತಾದಲ್ಲಿ 116 ಕೇಸ್ ಗಳಿವೆ. ಸಿದ್ದರಾಮಯ್ಯ ಗುರುತರ ಆರೋಪ ಹೊತ್ತಿದ್ದಾರೆ. ನೂರಾರು ವರ್ಷಗಳ ಇತಿಹಾಸ ಇರುವ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ರಸ್ತೆ ಎಂದು ಮರುನಾಮಕರಣ ಮಾಡಲು ಕೆಲವರು ಮುಂದಾಗಿದ್ದಾರೆ. ಇದು ಹಾಸ್ಯಾಸ್ಪದ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.